ಮಲ್ಪೆ: ಜನ ಮರಳೋ ಜಾತ್ರೆ ಮರಳೋ....ಕಡಲಲ್ಲಿ ಸಿಕ್ಕಿದ ಒಂದು ಪ್ರತಿಮೆಯ ಸುತ್ತ...



ಮಲ್ಪೆ- ಜನ ಮರಳೋ ಜಾತ್ರೆ ಮರಳೋ ಅನ್ನೋದು ಇದಕ್ಕೇ ಇರಬೇಕು! ಉಡುಪಿಯ ಕೃಷ್ಣದೇವರು ಆಚಾರ್ಯ ಮಧ್ವರಿಗೆ ಕಡಲ ತೀರದಲ್ಲಿ ಸಿಕ್ಕಿದ ಐತಿಹಾಸಿಕ ಘಟನೆ ಎಲ್ಲರಿಗೂ ಗೊತ್ತಿದೆ. ಅದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸುದ್ದಿಯಾಗುತ್ತಿದೆ! ಕಡಲ ತೀರದಲ್ಲಿ ಸಿಕ್ಕಿದ ಪ್ರತಿಮೆಯೊಂದು ನಾನಾ ಊಹಾಪೋಹಗಳನ್ನು ಸೃಷ್ಟಿಸಿದೆ. ಇಷ್ಟಕ್ಕೂ ಅಲ್ಲಿ ಆಗಿದ್ದೇನು ?

ಕಡಲಲ್ಲಿ ತೇಲಿ ಬಂದ ವಿಗ್ರಹ ಕಂಡು ಪುಳಕಿತರಾದ ಜನ

ಹರೇ ಕೃಷ್ಣ ಹರೇ ಕೃಷ್ಣ ಎಂದು ಕುಣಿದು ಕುಪ್ಪಳಿಸಿದ ಇಸ್ಕಾನ್ ಭಕ್ತರು

ಕಡಲಲ್ಲಿ ತೇಲಿ ಬಂದ ಕೃಷ್ಣನ ಪ್ರತಿಮೆ ಎಂದು ಸಂಭ್ರಮ

ವನ್ ಮೋರ್ ಮಿರಾಕಲ್ ಇನ್ ಮಲ್ಪೆ ಎಂದು ಬಣ್ಣನೆ



ಹೌದು, ಈ ಕಪ್ಪು ವಿಗ್ರಹವನ್ನು ಹಿಡಿದು ಸಂಭ್ರಮಿಸುತ್ತಿರುವ ಜನರನ್ನು ನೋಡಿ. ಇವರೆಲ್ಲ ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ಅನುಯಾಯಿಗಳು. ಉಡುಪಿಯ ಕೃಷ್ಣಮಠದಲ್ಲಿ ಏರ್ಪಾಟಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದರು. ಸಂಜೆಯ ಹೊತ್ತಿಗೆ 18 ಬಸ್ಸುಗಳಲ್ಲಿ ಮಲ್ಪೆ ಕಡಲ ತೀರಕ್ಕೆ ಹೋದರು. ಈವೇಳೆ ಸಮುದ್ರದ ಅಲೆಗಳ ಜೊತೆ ತೇಲಿ ಬಂದ ವಿಗ್ರಹವೊಂದು ಇವರನ್ನು ರೋಮಾಂಚನಗೊಳಿಸಿದೆ. ಓಡಿ ಹೋಗಿ ವಿಗ್ರಹ ತೆಗೆದುಕೊಂಡು ಬಂದು ಹರೇ ಕೃಷ್ಣ ಹರೇ ಕೃಷ್ಣ ಎಂದು ಸಂಭ್ರಮಿಸಲು ಶುರು ಮಾಡಿದ್ದಾರೆ. ಮಲ್ಪೆ ಕಡಲ ತೀರದಲ್ಲಿ ಎಂಟು ಶತಮಾನದ ಹಿಂದೆ ಆಚಾರ್ಯ ಮದ್ವರಿಗೆ ಉಡುಪಿಯ ಕಡಗೋಲು ಕೃಷ್ಣನ ಪ್ರತಿಮೆ ಸಿಕ್ಕಿದ ಉಲ್ಲೇಖವಿದೆ. ಇದೇ ಪವಾಡ ಮತ್ತೊಮ್ಮೆ ಸಂಭವಿಸಿತು ಎಂದು ಇವರೆಲ್ಲ ಪುಳಕಿತರಾಗಿದ್ದರು.

ಹೊಸತಾಗಿ ಮಲ್ಪೆ ಕಡಲ ತೀರಕ್ಕೆ ಬಂದವರಿಗೆ ಈ ರೀತಿಯ ರೋಮಾಂಚನ ಆಗೋದು ಸಹಜ. ಅದರಲ್ಲೂ ಕೃಷ್ಣ ಭಕ್ತಿಯ ಉತ್ತುಂಗದಲ್ಲಿರುವ ಇವರಿಗೆ ಈ ಪ್ರತಿಮೆ ಕೃಷ್ಣನ ಸ್ವರೂಪದಲ್ಲಿ ಕಂಡದ್ದು ಅಚ್ಚರಿ ಏನಲ್ಲ. ಇಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ! ಕಡಲ ತೀರದ ನಿವಾಸಿಗಳಿಗೆ ಈ ರೀತಿಯ ಪ್ರತಿಮೆ ಸಿಗುವುದು ಸಾಮಾನ್ಯ. ಕೆಲವೊಂದು ದೈವ ದೇವಾಲಯಗಳಲ್ಲಿ ಭಗ್ನಗೊಂಡ ಮೂರ್ತಿಗಳನ್ನು ಕಡಲಿಗೆ ವಿಸರ್ಜಿಸಲಾಗುತ್ತದೆ. ಹೀಗೆ ನೀರಿಗೆ ಬಿಟ್ಟ ವಿಗ್ರಹಗಳು ತೇಲಿಕೊಂಡು ದಡ ಸೇರುವುದುಂಟು! ಈ ರೀತಿ ಸಮುದ್ರಕ್ಕೆ ಎಸೆಯಲ್ಪಟ್ಟ ಜಯ- ವಿಜಯರ ವಿಗ್ರಹ ಇದಾಗಿದೆ. ದೇವಾಲಯದ ದ್ವಾರಪಾಲಕರಾಗಿ ಕೆತ್ತಲ್ಪಟ್ಟ ಜಯವಿಜಯರ ವಿಗ್ರಹ ಎಲ್ಲರಿಗೂ ಗೊತ್ತು. ಈ ವಿಗ್ರಹದ ರಚನೆ ಬಹಳ ಸ್ಪಷ್ಟವಾಗಿದೆ ಮತ್ತು ಯಾವುದೇ ಪ್ರಾಚೀನತೆಯನ್ನು ಹೊಂದಿಲ್ಲ ಎಂದು ಇತಿಹಾಸತಜ್ಞ ಟಿ. ಮುರುಗೇಶಿ ಸ್ಪಷ್ಟಪಡಿಸಿದ್ದಾರೆ.

ಸದ್ಯ ಈ ವಿಗ್ರಹವನ್ನು ಇಸ್ಕಾನ್ ಅನುಯಾಯಿಗಳು ಕೊಂಡೊಯ್ದಿದ್ದಾರೆ. ಅವರ ಬಾವುಕತೆ ಸಹಜ, ಆದರೆ ಈ ಪ್ರತಿಮೆಯ ವಿಚಾರ ಅಪಪ್ರಚಾರ ವಾಗದಿದ್ದರೆ ಸಾಕು ಎಂದು ಉಡುಪಿಯ ಜನ ಆಡಿಕೊಳ್ಳುತ್ತಿದ್ದಾರೆ.