ಉಡುಪಿ: ಸಮುದಾಯದಲ್ಲಿ ದಿಡೀರ್ ಸಾವು :ಎಚ್ಚರಿಕೆಗೆ ಕರೆ!!. ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ವಿಶೇಷಲೇಖನ - ಭಾಗ 1


ಸುತ್ತಮುತ್ತಲು ನಾವು ಗಮನಿಸುವುದೇನೆಂದರೆ ಆರೋಗ್ಯವಾಗಿದ್ದವರೂ, ಯುವಕರು ಸಹೋದ್ಯೋಗಿಗಳು ಜಿಮ್ ಗೆ ಹೋಗುವವರು ಪ್ರಸಿದ್ಧ ವ್ಯಕ್ತಿಗಳು ಸಾವನ್ನು ಅಪ್ಪುತ್ತಿರುವ ಸುದ್ದಿ. ಹೀಗೆ ಯಾರಾದರೂ ಏಕೆ ಸಾಯಬೇಕು? ಇದು ನಮ್ಮೆಲ್ಲರಿಗೂ ಕಾಡುತ್ತಿರುವ ವಿಷಯ. 

ಮನೋ ವೈದ್ಯನಾಗಿ ನೋಡುತ್ತಿರುವುದೇನೆಂದರೆ ಇಂತಹ ಸಾವಿನಿಂದ ಕುಟುಂಬ ಸಮುದಾಯಗಳು ಆತಂಕ ಭಯ ಗೊಂದಲ ಮತ್ತು ಅಸುರಕ್ಷಿತ ಭಾವನೆಗಳನ್ನು ಹೊಂದುತ್ತಿದೆ. ಹಲವರು ರೋಗಭಯದಿಂದ ನರಳಲಾರಂಭಿಸಿದ್ದಾರೆ. ನಾವೆಲ್ಲಿ ಸಾಯುತ್ತೇವೆಯೋ ಎಂಬ ಭಯ ಹಲವರನ್ನು ದಿಗ್ಭ್ರಮೆಗೊಳಿಸಿದೆ .

ಇಂತಹ ಸಾವುಗಳ ಬಗ್ಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಗಂಭೀರವಾದ ಚರ್ಚೆಯ ಅಗತ್ಯವಿದೆ. 

ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ದಿಡೀರ್ ಸಾವುಗಳನ್ನು “ನೋಟಿಫೈಯೇಬಲ್ ಕಾರಣ”ವನ್ನಾಗಿ ಮಾಡಿ ಇನ್ನು ಮುಂದೆ ಇಂತಹ ದಿಢೀರ್ ಸಾವುಗಳು ಸಂಭವಿಸಿದರೆ ಅದರಲ್ಲಿ 45 ವಯಸ್ಸಿಗಿಂತ ಕಡಿಮೆಯವರಲ್ಲಿ ಸಂಭವಿಸಿದರೆ ಸರ್ಕಾರಕ್ಕೆ ತಿಳಿಸಬೇಕು ಹಾಗೂ ಪೋಸ್ಟ್ ಮಾರ್ಟಂ ಮಾಡಬೇಕು ಎಂಬ ನಿರ್ಧಾರ ಸ್ವಾಗತ ಅರ್ಹ.

ದಿಢೀರ್ ಸಾವು ಅಜ್ಞಾತವಲ್ಲ.. ಹಲವಾರು ಸಾಂಸ್ಕೃತಿಕ ಕಾರಣಗಳು ಹಾಗೆಯೇ ಜನರ ನಡವಳಿಕೆಗಳಲ್ಲಿ ಬದಲಾವಣೆಗಳು ಇದಕ್ಕೆ ಕಾರಣವಾಗಿದೆ. ಕಳೆದ ಎರಡು ದರ್ಶಕಗಳಲ್ಲಿ ನಾವು ಸಾಂಪ್ರದಾಯಿಕ ಅಡುಗೆ ವಿಧಾನಗಳಿಂದ ದೂರ ಹೋಗುತ್ತಿದ್ದೇವೆ.ಹೆಚ್ಚು ಪ್ರಕ್ರಿಯೆಗೊಳಿಸಿದ ಎಣ್ಣೆ ಪುನಃ ಪುನಃ ಅದೇ ಎಣ್ಣೆಯ ಬಳಕೆ ಪುನಹ ಮಾಡುತ್ತೇವೆ ಹಾಗೆಯೇ app ಗಳ ಮೂಲಕ ತರಿಸಿಕೊಳ್ಳುವ ಫಾಸ್ಟ್ ಫುಡ್, ದಿನನಿತ್ಯದ ಆಹಾರದಲ್ಲಿ ಹೆಚ್ಚು ಕ್ಯಾಲರಿ, ಸಕ್ಕರೆ, ಚೀಸ್ ಪನ್ನೀರ್ ಮಯೋನೆಸ್ .. ನಮ್ಮ ಸುತ್ತಮುತ್ತ ಹೆಚ್ಚುತ್ತಿರುವ ಐಸ್ ಕ್ರೀಮ್ ಪಾರ್ಲರ್, ಕೆಫೆ ನಮ್ಮ ಮೆಟಬೋಲಿಕ್ ವ್ಯವಸ್ಥೆಗೆ ಒತ್ತಡ ನೀಡುವ ಆದರೆ ಮನಸ್ಸಿಗೆ ಆಕರ್ಷಿಸುವ ಆಹಾರಗಳನ್ನು ಉಪಯೋಗಿಸಲು ನಮಗೆ ಪ್ರೋತ್ಸಾಹಿಸುತ್ತಿದೆ. ವರ್ಷಪೂರ್ತಿ ಸಿಹಿ ತಿಂಡಿಗಳು ಲಭ್ಯ ವಾಗಿದೆ .ಹಾಗೆಯೇ ಶೀತಗ್ರಹದಲ್ಲಿ ಸಂಗ್ರಹಿಸಿದ ಹಣ್ಣು ಕೃತಕವಾಗಿ ಬೆಳೆಸಿದ ಹಣ್ಣುಗಳು, ಪ್ರಕ್ರಿಯೆಗೊಳಿಸಿದ ಸ್ನಾಕ್ಸ್ ಯಾವುದೇ ಸೀಸನ್ ನಲ್ಲಿ ಸಿಗುತ್ತವೆ.. ಮನಸ್ಸಿಗೆ ಒತ್ತಡವಿರುವಾಗ ಎಷ್ಟೋ ಜನರಿಗೆ ತಿನ್ನುವುದೇ ಔಷಧಿ!! ಆದರೆ ಇದು ಕ್ಯಾಲೊರಿ ಬಾಂಬ್” ಆಹಾರದ ಈ ದಾಳಿ ಹೆಚ್ಚು ಕ್ಯಾಲೊರಿ, ಕಡಿಮೆ ಪೋಷಕಾಂಶ

ಹೆಚ್ಚು ಪ್ರಕ್ರಿಯೆಗೊಳಿಸಿದ (ultra-processed) ಆಹಾರಗಳು—ಬಿಸ್ಕತ್, ಚಿಪ್ಸ್, ಪ್ಯಾಕೆಜ್ಡ್ ಸ್ನ್ಯಾಕ್ಸ್, ಫಾಸ್ಟ್ ಫುಡ್—ಇವುಗಳಲ್ಲಿ ಕ್ಯಾಲೊರಿ, ಸಕ್ಕರೆ, ಉಪ್ಪು, ಕೊಬ್ಬು ಹೆಚ್ಚಾಗಿ ಇರುತ್ತದೆ. ಇದು ತಯಾರು ಮಾಡುವವರು ಹೆಚ್ಚು ಪ್ರಾಫಿಟ್ ಬರಲು ಕಡಿಮೆ ಆರೋಗ್ಯದಾಯಕ ಪದಾರ್ಥಗಳನ್ನು ಉಪಯೋಗಿಸುತ್ತಾರೆ ಅನ್ನುವುದು ಕೂಡ ತಿಳಿದು ಬರುತ್ತಿದೆ. ಹಲವಾರು ಸಂದರ್ಭಗಳಲ್ಲಿ ಇಲ್ಲಿ ಸ್ವಚ್ಛತೆ ಕೂಡ ನಿರ್ಲಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ನಮ್ಮ ಜೀವನ ಶೈಲಿ ಗಮನಿಸೋಣ.ದೈಹಿಕ ಚಟುವಟಿಕೆ ಕಡಿಮೆ, ದಿನಕ್ಕೆ ಐದಾರು ಗಂಟೆ ಮಾತ್ರ ನಿದ್ರೆ, ತಂಬಾಕು ಧೂಮಪಾನ ಮದ್ಯ ಮಾದಕ ಪದಾರ್ಥಗಳ ಸೇವನೆ ಹೆಚ್ಚಳ, ಬೊಜ್ಜು ಏರುತ್ತಿದೆ!ಇದನ್ನು ಸರಿಪಡಿಸಲು ತೀವ್ರ ಜಿಮ್ ವ್ಯಾಯಾಮ.. ಎಷ್ಟೋ ಸಾರಿ ಈ ತೀವ್ರ ವ್ಯಾಯಾಮ ಮಾಡುವ ಮೊದಲು ಯಾವುದೇ ಆರೋಗ್ಯ ತಪಾಸಣೆ ಇಲ್ಲ!!

ಹೆಚ್ಚಿನವರಿಗೆ ರಕ್ತದೊತ್ತಡ ಸಕ್ಕರೆ ಕಾಯಿಲೆ ಕೊಲೆಸ್ಟ್ರಾಲ್ ಹೆಚ್ಚಳ ಇದರ ಬಗ್ಗೆ ಗೊತ್ತಾಗುವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟಾದಾಗ!!

ಇನ್ನು ನಾವು ಉಪಯೋಗಿಸುವ ಪ್ಲಾಸ್ಟಿಕ್ ನೀರಿನ ಬಾಟಲ್ ಗಳು ನೀರನ್ನು ಸಂಗ್ರಹಿಸುವ ಪ್ಲಾಸ್ಟಿಕ್ ಟ್ಯಾಂಕುಗಳು ಇದರ ದುಷ್ಪರಿಣಾಮಗಳ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಇದರ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ಅಗತ್ಯ.

ಲಸಿಕೆ ವಿವಾದ ಪ್ರಾಮಾಣಿಕ ಪರಿಶೀಲನೆ ಅಗತ್ಯ!!

ಡಾ. ಕಕ್ಕಿಲ್ಲಾಯ ಅಂತಹ ಪ್ರಾಮಾಣಿಕ ವೈದ್ಯರು ಉಲ್ಲೇಖಿಸುವಂತೆ ಕೋವಿಡ್ ಲಸಿಕೆಗಳ ದೀರ್ಘಕಾಲ ಪರಿಣಾಮಗಳು ವಿಶೇಷವಾಗಿ ಯುವಜನರಲ್ಲಿ ಇನ್ನೂ ಸ್ಪಷ್ಟವಾಗಿಲ್ಲ. 

ಲಸಿಕೆಗಳು ಲಕ್ಷಾಂತರ ಜೀವಗಳನ್ನು ಉಳಿಸಿದೆ, ಆದರೆ ಅಪರೂಪದ ಅಡ್ಡ ಪರಿಣಾಮಗಳು ಅಂದರೆ ಹೃದಯದ ರಕ್ತನಾಳಗಳ ಉರಿಯೂತ, ರಕ್ತ ಹೆಪ್ಪುಗಟ್ಟುವಿಕೆ, ಇದರ ಆಂಟಿಬಡಿ ಪ್ರತಿಕ್ರಿಯೆ ಇವುಗಳ ಬಗ್ಗೆ ಸಂಶೋಧನೆಗಳು ಮುಂದುವರಿಯಬೇಕು. ಲಸಿಕೆಗಳನ್ನು ನೇರವಾಗಿ ಆರೋಪಿಸಲು ಸಾಕ್ಷ ಇಲ್ಲದಿದ್ದರೂ ಅದರ ಅಡ್ಡ ಪರಿಣಾಮಗಳ ಸಾರ್ವಜನಿಕ ಚಿಂತನೆಗಳನ್ನು ನಿರ್ಲಕ್ಷ್ಯ ಮಾಡುವುದು ವೈಜ್ಞಾನಿಕವಲ್ಲ. 

( ಮುಂದುವರೆಯುವುದು)