ವಡ್ಡರ್ಸೆ ದೇವಸ್ಥಾನದಲ್ಲಿ ಆಡಳಿತ ಸಮಿತಿಯ ಅಕ್ರಮ - ಸಾರ್ವಜನಿಕರಿಂದ ಇಲಾಖೆಗೆ ದೂರು - ತನಿಖೆಗೆ ಆಗ್ರಹ


ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯ  ವಡ್ಡರ್ಸೆಯ ರಾಜ್ಯ ಮುಜರಾಯಿ ಇಲಾಖೆ ಅಧೀನಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಅವ್ಯವಹಾರ ನಡೆಸಿ, ದೇವಳದ ಹಣವನ್ನು ದುರುಪಯೋಗಪಡಿಸಿದ್ದಾರೆ ಎಂದು ಸಾರ್ವಜನಿಕರು ಇಲಾಖೆಗೆ ದೂರು ನೀಡಿದ್ದಾರೆ. 

ವಡ್ಡರ್ಸೆ ಗ್ರಾಮದ ಸಾರ್ವಜನಿಕರು ಎಂಬ ನೆಲೆಯಲ್ಲಿ ಉಡುಪಿಯ ಮುಜರಾಯಿ ಇಲಾಖಾ ಸಹಾಯಕ ಆಯುಕ್ತರಿಗೆ ಲಿಖಿತ ದೂರು ನೀಡಲಾಗಿದೆ.  

2012 ರಿಂದ 2025 ರವರೆಗೆ ದೇವಸ್ಥಾನದಲ್ಲಿ ಆಡಳಿತ ನಡೆಸಿದ ಆಡಳಿತ ಮಂಡಳಿಯ ವಿರುದ್ಧ ಹಲವು ವಿಷಯಗಳಲ್ಲಿ ಆಕ್ಷೇಪ ಸೂಚಿಸಿ ದೂರು ನೀಡಲಾಗಿದೆ. 2012 ರಿಂದ 2025 ರ ವರೆಗಿನ 13 ವರ್ಷಗಳವರೆಗೆ ಕೆ. ಉದಯ ಕುಮಾರ್ ಶೆಟ್ಟಿ ಎಂಬವರು ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದು, ಈ ಅವಧಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ವಾಸ್ತವವಾಗಿ ಮುಜರಾಯಿ ಇಲಾಖೆಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧಿಕಾರಾವಧಿ ಮೂರು ವರ್ಷಗಳು. 2012 ರಲ್ಲಿ ನೇಮಕವಾದ, ಉದಯ ಕುಮಾರ್ ಶೆಟ್ಟಿ ಅಧ್ಯಕ್ಷರಾಗಿರುವ ಸಮಿತಿಯ ಅವಧಿ 2013 ರಲ್ಲಿ ಅಂತ್ಯವಾಗಬೇಕಿತ್ತು. ಆದರೆ, ಅವರು 2025 ರವರೆಗೂ ಅಧಿಕಾರದಲ್ಲಿದ್ದು, ಈ ಅವಧಿಯಲ್ಲಿ ಅವ್ಯವಹಾರ ನಡೆಸಿದ್ದರು ಎಂದು ದೂರಲಾಗಿದೆ. ಸಮಿತಿ ಅಧ್ಯಕ್ಷರು ಇತರ ಸದಸ್ಯರ ಗಮನಕ್ಕೆ ತಾರದೇ ಪ್ರಮುಖ ವಿಷಯಗಳ ಬಗ್ಗೆ ಏಕ ಪಕ್ಷೀಯ ನಿರ್ಣಯ ಕೈಗೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಸಾರ್ವಜನಿಕರು ಮಾಹಿತಿ ಹಕ್ಕು ಕಾಯಿದೆಯಡಿ ವಿವರ ಕೋರಿ ಅರ್ಜಿ ಸಲ್ಲಿಸಿದ್ದು, ಕೆಲವು ವಿಷಯಗಳ ಬಗ್ಗೆ ಮಾಹಿತಿ ದೊರಕಿಲ್ಲ. ಈಗಿನ ಆಡಳಿತಾಧಿಕಾರಿ ತನಗೆ ಹಿಂದಿನ ಸಮಿತಿಯವರು ಆ ಬಗ್ಗೆ ವಿವರಗಳನ್ನು ಹಸ್ತಾಂತರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಶ್ರೀ ಮಹಾಲಿಂಗೇಶ್ವರ ದೇವಾಲಯದ ಒಳ ಪ್ರಾಂಗಣದಲ್ಲಿನ ತಗಡು ಮಾಡು ರಚನೆ, ಸಭಾ ಭವನ ದುರಸ್ತಿ, ಭವನದ ಬಾಡಿಗೆ ಹಣದ ವಿವರ, ಸುತ್ತು ಪೌಳಿಯ ಒಳ - ಹೊರಗೆ ಹಾಸಿದ ಕಲ್ಲು ಚಪ್ಪಡಿಯ ಕಾಮಗಾರಿ ವಿವರ, ನೂತನ ರಥ ನಿರ್ಮಾಣ, ರಥದ ಕೊಟ್ಟಿಗೆ ನಿರ್ಮಾಣದ ಖರ್ಚಿನ ವಿವರ, ದೇವಸ್ಥಾನದ ಮುಂಭಾಗ ನಿರ್ಮಿಸಿದ ಅಂಗಡಿ ಕೋಣೆಗಳು, ಮನೆಯ ವಿವರ, ಈ ಬಗ್ಗೆ ತೆಗೆದುಕೊಳ್ಳಲಾದ ಸಮಿತಿಯ ನಿರ್ಣಯದ ವಿವರ, ರಥಬೀದಿಯ ಡಾಂಬರೀಕರಣ, ಟೆಂಡರ್ ಮತ್ತು ಅನುದಾನದ ವಿವರ, 2012ರಿಂದ 2025 ರವರೆಗಿನ ದೇವರ ಚಿನ್ನ - ಬೆಳ್ಳಿ ಒಡವೆ, ಸ್ವತ್ತುಗಳ ವಿವರ, ಹುಂಡಿ ಆದಾಯ, ಬ್ಯಾಂಕಿಗೆ ಜಮಾ ಮಾಡಿದ ವಿವರ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಹಕ್ಕಿನಡಿ ವಿವರ ಕೋರಲಾಗಿತ್ತು. 

ಆದರೆ, ಆಡಳಿತ ಸಮಿತಿಯ ಕೊನೆಯ ಅವಧಿಯ ಹುಂಡಿ ಲೆಕ್ಕಾಚಾರ, ಒಡವೆಗಳ ಬಗ್ಗೆ ವಿವರ ದೊರಕಿದ್ದು, ಅದರ ಮೊದಲಿನ ಅವಧಿಯಲ್ಲಿನ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ. 

ಸಾರ್ವಜನಿಕರು ಇಲಾಖೆಗೆ ನೀಡಿದ ದೂರಿನಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಒದಗಿಸುವಂತೆ ಆಗ್ರಹಿಸಿದ್ದಾರೆ. 2015ರಿಂದ 2025 ರವರೆಗೆ ಕೆ. ಉದಯ ಕುಮಾರ್ ಶೆಟ್ಟಿ ಹೇಗೆ ಸಮಿತಿ ಅಧ್ಯಕ್ಷರಾಗಿ ಆಡಳಿತ ನಡೆಸಿದರು ಎಂದೂ ವಿವರ ಅಪೇಕ್ಷಿಸಲಾಗಿದೆ.

ಸಾರ್ವಜನಿಕ ದೂರಿನಲ್ಲಿ ಕಾಣಿಸಿದ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವುದಲ್ಲದೆ, ಈ ಆಡಳಿತ ಸಮಿತಿಯ ಎಲ್ಲ ಅಕ್ರಮಗಳ ಬಗ್ಗೆಯೂ ಸರಿಯಾದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 'ಸಿ' ದರ್ಜೆಯ ದೇವಸ್ಥಾನವಾಗಿರುವ ಇಲ್ಲಿ ಪ್ರಸ್ತುತ ವ್ಯವಸ್ಥಾಪನಾ ಸಮಿತಿ ಇಲ್ಲ. ಕಂದಾಯಾಧಿಕಾರಿ ಮಂಜು ಬಿಲ್ಲವ ಆಡಳಿತಾಧಿಕಾರಿಯಾಗಿದ್ದಾರೆ.