ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಉಮ್ರಾ ಯಾತ್ರೆಗೆ ತೆರಳಿದ್ದ 42 ಭಾರತೀಯರು ಸಾವು

ಏಜೆನ್ಸಿ ಚಿತ್ರ


ಸೌದಿ ಅರೇಬಿಯಾದ ಮೆಕ್ಕಾಗೆ ಉಮ್ರಾ ಯಾತ್ರೆಗೆಂದು ತೆರಳಿದ್ದ ವೇಳೆ ಬಸ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ 42 ಭಾರತೀಯರು ಸಜೀವ ದಹನವಾಗಿರುವ ದಾರುಣ ಘಟನೆ ವರದಿಯಾಗಿದೆ.

ಮೆಕ್ಕಾದ ಕಾಬಾದಲ್ಲಿ ಉಮ್ರಾ ಯಾತ್ರೆ ಮುಗಿಸಿ ಮದೀನಾಕ್ಕೆ ತೆರಳುತ್ತಿದ್ದ ವೇಳೆ ಬಸ್ ಹಾಗೂ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಈ ಬಸ್‌ನಲ್ಲಿ 43 ಹೈದರಾಬಾದ್‌ ಮೂಲದ ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಪೈಕಿ ಓರ್ವ ಮಾತ್ರ ಬದುಕುಳಿದಿರುವುದಾಗಿ ವರದಿಯಾಗಿದೆ.

ಮೃತರಲ್ಲಿ 20 ಮಹಿಳೆಯರು ಮತ್ತು ಹತ್ತು ವರ್ಷದೊಳಗಿನ 11 ಮಕ್ಕಳು ಕೂಡ ಇದ್ದರೆಂದು ಪ್ರಾಥಮಿಕ ಮಾಹಿತಿ ದೊರೆತಿದ್ದು, ಎಲ್ಲರೂ ಕೂಡ ಹೈದರಾಬಾದ್‌ ಮೂಲದವರೆಂದು ತಿಳಿದುಬಂದಿದೆ.

ಸೌದಿಯ ಕಾಲಮಾನ ರಾತ್ರಿ 11 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ ಬೆಳಗಿನ ಜಾವ 1.30) ಈ ಅಪಘಾತ ಸಂಭವಿಸಿದೆ. ಮಕ್ಕಾದಲ್ಲಿ ತೀರ್ಥಯಾತ್ರೆ ಮುಗಿಸಿ ಮದೀನಾ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬದ್ರ್ ಮತ್ತು ಮದೀನಾ ನಡುವಿನ ಮುಪರಹತ್ ಎಂಬ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದ ಎಲ್ಲಾ ಯಾತ್ರಿಕರು ಹೈದರಾಬಾದ್ ಮೂಲದವರು ಎಂದು ಉಮ್ರಾ ಕಂಪನಿ ಕೂಡ ದೃಢಪಡಿಸಿದೆ.ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಪಡೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದರಾದರೂ, ಸುಮಾರು ಎರಡು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಘಟನೆಯಲ್ಲಿ ಓರ್ವ ಯುವಕ ಮಾತ್ರ ಬದುಕುಳಿದಿದ್ದು, ಆತನನ್ನು 25 ವರ್ಷದ ಅಬ್ದುಲ್ ಶುಹೈಬ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಯಾತ್ರಿಕರೆಲ್ಲರೂ ನಿದ್ರೆಯಲ್ಲಿದ್ದದ್ದರಿಂದ ಈ ಭಾರೀ ಅವಘಡ ಸಂಭವಿಸಿದೆ.

ಯಾತ್ರಿಕರಿಗೆ ಉಮ್ರಾ ವೀಸಾ ಮತ್ತು ಪ್ರಯಾಣದ ವ್ಯವಸ್ಥೆ ಮಾಡಿದ್ದ ಏಜೆನ್ಸಿಗಳು ಮುಂದಿನ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.