ಕಾರ್ಕಳ : ಪೋಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಮಷೀನ್ ಗಳೊಂದಿಗೆ ಕೂಲಿ ಕಾರ್ಮಿಕರನ್ನು ಸಾಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಪೊಲೀಸರು ವಾಹನವನ್ನು ಬೆನ್ನಟ್ಟಿ ಹಿಡಿದಿದ್ದಾರೆ.ಬಳಿಕ ಗೂಡ್ಸ್ ಮಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕಾರ್ಕಳ ನ್ಯಾಯಾಲಯವು ವಾಹನದ ಮಾಲಕ ನಾಗಪ್ಪ ಎಂಬವರಿಗೆ 10 ಸಾವಿರ ರೂ. ದಂಡ ವಿಧಿಸಿದೆ.
ಕಾರ್ಕಳ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಬೆಳಿಗ್ಗೆ ಕಾರ್ಮಿಕರಮ್ನು ಕೆಲಸಕ್ಕೆ ಕರೆದುಕೊಂಡು ಹೋಗುವ ಮತ್ತು ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಗೂಡ್ಸ್ ವಾಹನಗಳಲ್ಲಿ ಸಿಮೆಂಟ್ ಕಾಂಕ್ರೀಟ್ ಮಷೀನ್ ನೊಟ್ಟಿಗೆ ತುಂಬಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು ಈ ಬಗ್ಗೆ ಹಲವಾರು ಬಾರಿ ಖಡಕ್ ಎಚ್ಚರಿಕೆ ನೀಡಿದ್ದರೂ ಕ್ಯಾರೇ ಎನ್ನದ ಕಾಂಟಾಕ್ಟ್ ರಾದರು ಮತ್ತದೇ ಚಾಳಿಯನ್ನು ಮುಂದುವರಿಸುತಿದ್ದಾರೆ. ವಾಹನದಲ್ಲಿ ಇಷ್ಟಬಂದಂತೆ ಕಾರ್ಮಿಕರನ್ನು ತುಂಬಿಸಿಕೊಂಡು, ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದರಿಂದ ದಾರಿಯಲ್ಲಿ ಓಡಾಡುವ ಇತರ ವಾಹನಗಳಿಗೂ ತೊಂದರೆಯಾಗುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿದ್ದವು. ಈ ಬಗ್ಗೆ ಕಾರ್ಯಪ್ರವೃತ್ತರಾದ ಕಾರ್ಕಳ ನಗರ ಪೊಲೀಸರು ವಾಹನವನ್ನು ಬೆನ್ನಟ್ಟಿ ಕಾರ್ಕಳ ಪುರಸಭಾ ವ್ಯಾಪ್ತಿಯ ಶಿವತಿಕೆರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಕಾರ್ಕಳ ನ್ಯಾಯಾಲಯಕ್ಕೆ ಒಪ್ಪಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಕೆಲವು ವರ್ಷಗಳ ಹಿಂದೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ಗಾನ ಗ್ರಾಮದ ಶಾಲಾ ಮುಂಭಾಗದ ತಿರುವಿನಲ್ಲಿ ವಾಹನದಲ್ಲಿದ್ದ ಸಿಮೆಂಟ್ ಕಾಂಕ್ರೀಟ್ ಮಷೀನ್ ಕಾರ್ಮಿಕರ ಮೇಲೆ ಮಗುಚಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಹಲವರು ಕಾರ್ಮಿಕರು ಗಂಭೀರ ಗಾಯ ಗೊಂಡಿದ್ದರು. ಇತ್ತೀಚೆಗೆ ಕಾಪು ತಾಲೂಕಿನಲ್ಲೂ ಇಂತಹ ಘಟನೆಗಳು ಮರುಕಳಿಸಿದ್ದವು. ಜಿಲ್ಲೆಯಾದ್ಯಂತ ಇದು ನಡೆಯುತ್ತಿದ್ದು ಎಲ್ಲ ತಾಲೂಕುಗಳಲ್ಲೂ ಕಾರ್ಕಳದ ಮಾದರಿಯಲ್ಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
