ಅಕ್ಷತಾ ಪೂಜಾರಿ ಕೇಸ್: ಬ್ರಹ್ಮಾವರ ಠಾಣೆಯಿಂದ ತನಿಖೆ ವರ್ಗಾವಣೆ : ಲೋಪ ಕಂಡುಬಂದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಶಿಸ್ತು ಕ್ರಮ : ಉಡುಪಿ ಎಸ್ಪಿ

ಎಸ್ಪಿ ಹರಿರಾಂ ಶಂಕರ್


ಉಡುಪಿ: ದಿನಾಂಕ: 09/12/2025ಕ್ಕೆ ಆರೋಪಿ ಆಶಿಕ್‌ ಎನ್ನುವವರ ವಿರುಧ್ದ ಕೋರ್ಟ್‌ನಿಂದ 2014ರಲ್ಲಿ ನಡೆದ ಒಂದು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟ ಸಜೆ ಆಗಿ, ಇದರ ಬಗ್ಗೆ 20 ಲಕ್ಷ ಹಾಗೂ ಅದರ ಬಡ್ಡಿಯನ್ನು ನ್ಯಾಯಾಲಯಕ್ಕೆ ಜಮಾ ಮಾಡುವ ಕುರಿತು ನ್ಯಾಯಾಲಯದ ತೀರ್ಪು ಬಂದಿರುತ್ತದೆ. ಆರೋಪಿ ಆಶಿಕ್‌ರವರು ನ್ಯಾಯಾಯಕ್ಕೆ ಹಾಜರಾಗದೇ ಹಾಗೂ ಹಣವನ್ನು ಕಟ್ಟದೇ ಇರುವುದರಿಂದ,  ನ್ಯಾಯಾಲಯವು ಆರೋಪಿಯನ್ನು ದಸ್ತಗಿರಿ ಮಾಡಿ PCJ & CJM ನ್ಯಾಯಾಲಯ, ಉಡುಪಿ ಇದರ ಮುಂದೆ ದಿನಾಂಕ 17/12/2025ರ ಒಳಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸ್‌ ಠಾಣೆಗೆ ಸೂಚನಾ ಪತ್ರ ಹೊರಡಿಸಿ ಆದೇಶ ಮಾಡಿರುತ್ತದೆ. 

ಈ ಬಗ್ಗೆ ನ್ಯಾಯಾಲಯದ ಸೂಚನಾ ಪತ್ರದಂತೆ ವಾರಂಟ್ ಜಾರಿ ಮಾಡುವ ಕುರಿತು, ಮಲ್ಪೆ ಪೊಲೀಸ್‌ ಠಾಣಾ ಸಿಬ್ಬಂದಿಯವರು ಬ್ರಹ್ಮಾವರದ ಮನೆಯಲ್ಲಿ ಜಾರಿ ಮಾಡಲು ತೆರಳಿರುತ್ತಾರೆ. ಈ ಸಂದರ್ಭದಲ್ಲಿ ಆ ಮನೆಯಲ್ಲಿನ ಇಬ್ಬರು ಮಹಿಳೆಯು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. 

ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಬಿಲ್ಲವ ಸಮಾಜದ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರುಗಳು ಆ ದಿನದ ಘಟನೆಯ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದುದರಿಂದ ಸದ್ಯಕ್ಕೆ ಈ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿ, ಈ ಪ್ರಕರಣದ ತನಿಖೆಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಿಂದ ವರ್ಗಾಯಿಸಿ, ಸೂಕ್ತವಾದ ತನಿಖಾಧಿಕಾರಿಗೆ ವರ್ಗಾಯಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. 

ಅದಲ್ಲದೇ ಸಂತ್ರಸ್ಥ ಮಹಿಳೆಯರು ಇಲಾಖಾ ಸಿಬ್ಬಂದಿಗಳ ಮೇಲೆ ಮಾಡಿರುವಂತಹ ಆರೋಪಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ಪಡಿಸಿ, ಲೋಪಗಳು ಕಂಡುಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ದರಿಸಿದ್ದೇನೆ. ಈ ಘಟನೆ ಸಂಬಂಧಪಟ್ಟಂತೆ ನ್ಯಾಯ ಒದಗಿಸಬೇಕಾದ ಹಿತದೃಷ್ಠಿಯಿಂದ ಈ ನಿರ್ಧಾರವನ್ನು ಕೈಗೊಂಡಿರುತ್ತೇನೆ. 

ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯಲ್ಲಿ ಗೊಂದಲ ಹಾಗೂ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.