ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಅಧಿಕೃತ. ವೆಬ್‌ಸೈಟನ್ನು ಹೋಲುವ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸೀರ್ ಹುಸೇನ್ ಬಂಧಿತ. ಆತನು ದೇವಸ್ಥಾನದ ವಸತಿಗೃಹಗಳಲ್ಲಿ ಮುಂಗಡವಾಗಿ ಕೊಠಡಿ ಕಾದಿರಿಸುವ ಬಗ್ಗೆ ತನ್ನ ನಕಲಿ ವೆಬ್‌ಸೈಟ್ ಮೂಲಕ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸುತ್ತಿದ್ದ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಲ್ಯಾಪ್‌ಟಾಪ್ ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗೆ ಬೈಂದೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ. ಹಾಗೂ ಸಂತೋಷ್ ಎ. ಕಾಯ್ಕಿಣಿ, ಕೊಲ್ಲೂರು ಠಾಣೆಯ ಎಸ್‌ಐ ವಿನಯ ಎಂ. ಕೊರ್ಲಹಳ್ಳಿ ಹಾಗೂ ಭೀಮಶಂಕರ, ಕೊಲ್ಲೂರು ಠಾಣೆಯ ನಾಗೇಂದ್ರ, ಗಂಗೊಳ್ಳಿ ಠಾಣೆಯ ರಾಘವೇಂದ್ರ ಶೆಟ್ಟಿ, ಕೃಷ್ಣ ದೇವಾಡಿಗ ಪಾಲ್ಗೊಂಡಿದ್ದರು.
