ವಿಟ್ಲ:ಕೋಳಿ ಅಂಕಕ್ಕೆ ದುಷ್ಪ್ರೇರಣೆ : ಶಾಸಕ ಅಶೋಕ್ ಕುಮಾರ್ ರೈ ಮತ್ತು 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು



ವಿಟ್ಲ: ​ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಗದ್ದೆಯೊಂದರಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಡಿ.20 ರಂದು ಮುರಳೀಧರ ರೈ ಎಂಬವರ ಜಾಗದಲ್ಲಿ ಅಕ್ರಮವಾಗಿ ಅಂಕ ಆಯೋಜಿಸಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳದಲ್ಲಿ ಗುಂಪು ಸೇರಿದ್ದ ಜನರಿಗೆ ಪೊಲೀಸರು ಕಾನೂನು ತಿಳುವಳಿಕೆ ನೀಡಿದರೂ, ಆಟ ಮುಂದುವರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

​ದಾಳಿ ನಡೆದ ಸಮಯದಲ್ಲಿ ಸ್ಥಳದಲ್ಲಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಅಲ್ಲಿ ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದ್ದಾರೆ.ಶಾಸಕರ ಪ್ರಚೋದನೆಯಿಂದಾಗಿ ಜನರು ಅಂಕವನ್ನು ಆರಂಭಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಭದ್ರತೆಯನ್ನು ಏರ್ಪಡಿಸಿ ಅಂಕವನ್ನು ತಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

​ಕಾರ್ಯಾಚರಣೆಯ ವೇಳೆ 16 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 22 ಹುಂಜಗಳು ಹಾಗೂ ಅಂಕಕ್ಕೆ ಬಳಸುವ ಬಾಳುಗಳನ್ನು (ಕತ್ತಿ) ವಶಪಡಿಸಿಕೊಳ್ಳಲಾಗಿದೆ. ಜಾಗದ ಮಾಲೀಕ ಮುರಳೀಧರ ರೈ, ಪ್ರಚೋದನೆ ನೀಡಿದ ಶಾಸಕರು ಹಾಗೂ 16 ಮಂದಿ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS-2023) ಕಾಯ್ದೆಯ ವಿವಿಧ ಕಲಂಗಳು ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.