ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ- ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ : ಪ್ರಜಾಸೇವಕನಾಗಿ ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ

 


ಉಡುಪಿ: ಕರಾವಳಿ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದರೊಂದಿಗೆ ಕರಾವಳಿ ಮತ್ತು ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.











ಉಚ್ಚಿಲ ದಸರಾ ಪ್ರಯುಕ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಳಿಕ ತುಳು ಭಾಷೆಯಲ್ಲಿ ಶುಭಾಶಯ ಕೋರಿ ಭಾಷಣವನ್ನು ಆರಂಭಿಸಿದ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ದೇವಿಯ ಆಶೀರ್ವಾದ ಪಡೆದಿದ್ದೆ. ಈಗ ಮುಖ್ಯಮಂತ್ರಿಯಾಗಿ ಪ್ರಜಾಸೇವಕನಾಗಿ ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ ಎಂದರು. ಮಹಿಳಾ ಸಬಲೀಕರಣವೇ ಸಮಾಜದ ಪ್ರಗತಿಗೆ ದಾರಿ. ಮಹಾಲಕ್ಷ್ಮಿ ಸಂಪತ್ತಿನ ಸಂಕೇತವಾದರೆ, ಸರಸ್ವತಿ ಜ್ಞಾನದ ಸಂಕೇತ, ಮಹಾಕಾಳಿ ಶಕ್ತಿಯ ಸಂಕೇತ ಎಂದು ಹೇಳಿದರು.


ಮೀನುಗಾರ ಮಹಿಳೆಯರು ಬಡ್ಡಿರಹಿತ ಸಾಲದ ಸೌಲಭ್ಯ ಹಾಗೂ ಬಂದರು ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯ ಯಾವುದೇ ಘೋಷಣೆ ಮಾಡುವುದಿಲ್ಲ. ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕರಾವಳಿಯ ಚಿನ್ನ ಮತ್ತು ಮರದ ಕೆತ್ತನೆ ಕಲೆಯನ್ನು ಉಳಿಸಿ ಉದ್ಯೋಗಾವಕಾಶ ಸೃಷ್ಟಿಸಲು ಕಾರ್ಕಳದಲ್ಲಿ ಪಾರ್ಕ್‌ ನಿರ್ಮಾಣದ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ದೇವಸ್ಥಾನಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ. ಯುವಕರ ವಲಸೆ ತಡೆಯುವುದು ಹಾಗೂ ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.ದಸರಾ ಕೇವಲ ಹಬ್ಬವಲ್ಲ, ಅದು ಆರ್ಥಿಕತೆಯ ಚಕ್ರ. ಜಾತಿ-ಧರ್ಮಗಳ ಭೇದ ಮರೆತು ಮಾನವೀಯತೆಗೆ ಆದ್ಯತೆ ನೀಡಬೇಕು. ರಾಜ್ಯದ ಅಭಿವೃದ್ಧಿಗೆ ಜನರ ಆಶೀರ್ವಾದ ಮತ್ತು ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.ಮಂಗಳೂರು ವಿಮಾನ ನಿಲ್ದಾಣದಿಂದ ಆಗಮಿಸಿದ ಮುಖ್ಯಮಂತ್ರಿಗಳಿಗೆ ಚಂಡೆ, ಡೋಲು, ಹುಲಿವೇಷ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.ಬಳಿಕ ವಸ್ತುಪ್ರದರ್ಶನ ಉದ್ಘಾಟಿಸಿದ ಮುಖ್ಯಮಂತ್ರಿಗಳು ಮೊಗವೀರ ಕುಲಗುರು ಮಾಧವ ಮಂಗಲ ಗುರುಗಳ ಕಂಚಿನ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದರು, ಈ ವೇಳೆ ಡಿ ಕೆ ಶಿವಕುಮಾ‌ರ್ ಜೊತೆ ಸಚಿವ ಟಿ ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.