ಉಡುಪಿ: ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಗಾಂಜಾ, ಮೆಥಾಂಫೆಟಮೈನ್, ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡು ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.
ಶಿರ್ವ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಭದ್ರಮ್ಮ ರಸ್ತೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1.354 ಕೆಜಿ ಗಾಂಜಾ, 32.74 ಗ್ರಾಂ ಮೆಥಾಂಫೆಟಮೈನ್, ಎರಡು ಕಾರು, ಸ್ಕೂಟರ್, 9 ಮೊಬೈಲ್‌ಗಳು, ಎರಡು ತೂಕದ ಯಂತ್ರ ಹಾಗೂ ₹75,010 ನಗದು ಸೇರಿ ₹13.96 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಅಲ್ನಾಜ್ ಅಲಿಯಾಸ್ ಮೊಹಮ್ಮದ್ ಅನಾಸ್, ಮೊಹಮ್ಮದ್ ಅಲ್ತಾಪ್, ಸ್ಟ್ಯಾನಿ ಸಂದೀಪ್, ಶಾಕೀಬ್, ಮೊಹಮ್ಮದ್ ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್ ಹಾಗೂ ಸಂತೋಷ್ ದೇವಾಡಿಗ ಎಂಬ 8 ಮಂದಿಯನ್ನು ಬಂಧಿಸಲಾಗಿದೆ.
ಇದೇ ವೇಳೆ ಉಡುಪಿ ನಗರ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ 3ನೇ ಅಡ್ಡರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿ 1.659 ಕೆಜಿ ಗಾಂಜಾ, ₹1.26 ಲಕ್ಷ ನಗದು ಹಾಗೂ ಡಿಜಿಟಲ್ ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಸಾಗರ ಮೂಲದ, ಪ್ರಸ್ತುತ ಉಡುಪಿಯಲ್ಲಿ ವಾಸಿಸುತ್ತಿದ್ದ 31 ವರ್ಷದ ಶ್ರೀವತ್ಸ ಕೆ.ಜಿ. ಎಂಬಾತನನ್ನು ಬಂಧಿಸಲಾಗಿದೆ.
ಎರಡೂ ಪ್ರಕರಣಗಳಲ್ಲಿ ಒಟ್ಟು ₹16,01,584 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಂಧಿತರ ಪೈಕಿ ಕೆಲವರ ವಿರುದ್ಧ ಉಡುಪಿ, ಮಲ್ಪೆ, ಮಣಿಪಾಲ, ಕಾರ್ಕಳ ಗ್ರಾಮಾಂತರ ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಶಿರ್ವ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಅನಿಲ್ ತನಿಖೆ ನಡೆಸುತ್ತಿದ್ದಾರೆ. ಉಡುಪಿ ನಗರ ಠಾಣೆಯಲ್ಲೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರಕಾಶ್ ತನಿಖೆ ಕೈಗೊಂಡಿದ್ದಾರೆ.
ಎಎಸ್‌ಪಿ ಈಶಿತಾ ಗುಪ್ತಾ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್.ಪಿ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.









