ಉಡುಪಿ: ನಿಷೇಧಿತ ಎಂಡಿಎಂಎ ಮಾರಾಟಕ್ಕೆ ಯತ್ನ – ಓರ್ವನ ಬಂಧನ -₹85 ಸಾವಿರ ಮೌಲ್ಯದ ಮಾದಕ ವಸ್ತು, ಸ್ಕೂಟರ್ ಸಹಿತ ಸೊತ್ತು ವಶ

 


ಉಡುಪಿ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಓರ್ವನನ್ನು ಉಡುಪಿ ನಗರ ಪೊಲೀಸರು ಬಂಧಿಸಿ, ಸುಮಾರು ₹85 ಸಾವಿರ ಮೌಲ್ಯದ ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಕಾಪು ತಾಲೂಕಿನ ಉದ್ಯಾವರ ಅಂಕುದ್ರು ನಿವಾಸಿ ವಿಜಯ್ ಅಲಿಯಾಸ್ ವಿಜಯ್ ಪೂಜಾರಿ (36) ಎಂದು ಗುರುತಿಸಲಾಗಿದೆ.

ಅ.17ರಂದು ರಾತ್ರಿ 10.30ರ ಸುಮಾರಿಗೆ ಉಡುಪಿ ನಗರದ ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ಆರೋಪಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಉಡುಪಿ ನಗರ ಠಾಣೆಯ ಪಿಎಸ್ಐ ಭರತೇಶ್ ಕಂಕಣವಾಡಿ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಕೂಟರ್‌ನ ಡಿಕ್ಕಿಯಲ್ಲಿ ಮಾದಕ ವಸ್ತುಗಳನ್ನು ಇರಿಸಿಕೊಂಡು ಮಾರಾಟ ಮಾಡಲು ಬಂದಿರುವುದು ತಿಳಿದುಬಂದಿದೆ.

ಆರೋಪಿಯಿಂದ 17.66 ಗ್ರಾಂ ತೂಕದ ಒಂಬತ್ತು ಜಿಪ್ ಕವರ್‌ಗಳಲ್ಲಿದ್ದ ಆಂಫೆಟಮೈನ್/ಮೆಥಾಂಫೆಟಮೈನ್ ಮಾದಕ ವಸ್ತು (ಅಂದಾಜು ಮೌಲ್ಯ ₹35,000), ಮಾದಕ ವಸ್ತು ತೂಕ ಮಾಡಲು ಬಳಸುತ್ತಿದ್ದ ಯಂತ್ರ, ಏಳು ಖಾಲಿ ಜಿಪ್ ಕವರ್‌ಗಳು ಹಾಗೂ ಕಾಗದದಲ್ಲಿ ಸುತ್ತಿಡಲಾಗಿದ್ದ 2.18 ಗ್ರಾಂ ತೂಕದ ಮಾತ್ರೆ ಮತ್ತು ಪುಡಿ ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ, ಆರೋಪಿಯ ಬಳಿಯಿದ್ದ ವಿವೋ ವೈ16 ಮೊಬೈಲ್ ಫೋನ್ (₹8,000) ಹಾಗೂ ಕೃತ್ಯಕ್ಕೆ ಬಳಸಿದ್ದ KA-20-EG-7918 ನೋಂದಣಿ ಸಂಖ್ಯೆಯ ಸುಜುಕಿ ಆಕ್ಸೆಸ್ 125 ಸ್ಕೂಟರ್ (₹40,000) ವಶಕ್ಕೆ ಪಡೆಯಲಾಗಿದೆ. ಒಟ್ಟು ಸೊತ್ತಿನ ಅಂದಾಜು ಮೌಲ್ಯ ₹85,000 ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಈ ಹಿಂದೆಯೂ ಪ್ರಕರಣಗಳು

ಆರೋಪಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 2026ರಲ್ಲಿ ಹಾಗೂ 2025ರಲ್ಲಿ ತಲಾ ಒಂದು ಎನ್‌ಡಿಪಿಎಸ್ ಪ್ರಕರಣ, 2025ರಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಮತ್ತೊಂದು ಪ್ರಕರಣ ಮತ್ತು ಕಾಪು ಪೊಲೀಸ್ ಠಾಣೆಯಲ್ಲಿ 2026ರಲ್ಲಿ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಾಗಿವೆ. ಈತ ಸೆ.24ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2026ರಂತೆ ಎನ್‌ಡಿಪಿಎಸ್ ಕಾಯಿದೆಯ ಕಲಂ 8(ಸಿ), 22(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ರತ್ನಾಕರ್ ಕೆ. ತನಿಖೆ ಕೈಗೊಂಡಿದ್ದಾರೆ.

ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್ಐ ಭರತೇಶ್ ಕಂಕಣವಾಡಿ, ಪಿಎಸ್ಐ ರತ್ನಾಕರ್ ಕೆ. ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೀವನ್ ಕುಮಾರ್, ಆನಂದ ಗಾಣಿಗ, ಪ್ರಸನ್ನ ಸಿ., ಹೇಮಂತ್, ಓಬಳೇಶ ಆನಂದಯ್ಯ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.