ಕೋಟ: ಅಕ್ರಮವಾಗಿ ಜಾನುವಾರು ಸಾಗಾಟ; ನಾಲ್ವರು ವಶಕ್ಕೆ 7 ಜಾನುವಾರು, ಪಿಕಪ್ ವಾಹನ ಸೇರಿ ₹2.33 ಲಕ್ಷ ಮೌಲ್ಯದ ಸೊತ್ತು ವಶ

 

ಸಾಂದರ್ಭಿಕ ಚಿತ್ರ

ಕೋಟ: ಮಾಂಸಕ್ಕಾಗಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದು ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ಅ.13ರಂದು ರಾತ್ರಿ ತೆಕ್ಕಟ್ಟೆ ಜಂಕ್ಷನ್ ಬಳಿ ನಡೆದಿದೆ.

ಕೋಟ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಆರ್. ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೊಟೇಶ್ವರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ KA-40-B-8708 ನೋಂದಣಿ ಸಂಖ್ಯೆಯ ಬುಲೆರೋ ಪಿಕಪ್ ವಾಹನವನ್ನು ಕಂಡು ಅನುಮಾನಗೊಂಡು ತಪಾಸಣೆಗೆ ಮುಂದಾದಾಗ, ವಾಹನದಲ್ಲಿದ್ದ ನಾಲ್ವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅವರನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದ್ದಾರೆ.


ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆಯ ಪುನಿತ್ (27), ಕೋಲಾರ ಜಿಲ್ಲೆಯ ಗಣೇಶ (26), ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷ್ಣಪ್ಪ (40) ಹಾಗೂ ಶ್ರೀನಿವಾಸ (56) ಎಂದು ಗುರುತಿಸಲಾಗಿದೆ.

ವಾಹನದಲ್ಲಿ ಐದು ದನಗಳು ಹಾಗೂ ಎರಡು ಕರುಗಳು ಸೇರಿದಂತೆ ಒಟ್ಟು ಏಳು ಜಾನುವಾರುಗಳನ್ನು ಹಿಂಸಾತ್ಮಕವಾಗಿ, ಕುತ್ತಿಗೆಗೆ ನೈಲಾನ್ ಹಗ್ಗ ಕಟ್ಟಿ, ಆಹಾರ ಮತ್ತು ನೀರು ನೀಡದೆ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಪೊಲೀಸರು ₹2 ಲಕ್ಷ ಮೌಲ್ಯದ ಪಿಕಪ್ ವಾಹನ, ₹29,000 ಮೌಲ್ಯದ ಏಳು ಜಾನುವಾರುಗಳು, ಎರಡು ಮೊಬೈಲ್‌ಗಳು ಹಾಗೂ ₹1,850 ನಗದನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಸ್ವತ್ತುಗಳ ಅಂದಾಜು ಮೌಲ್ಯ ₹2,33,850 ಆಗಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 155/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ, ಪ್ರಾಣಿ ಹಿಂಸೆ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.