ನವದೆಹಲಿ: ತಮಿಳುನಾಡಿನಲ್ಲಿ ಜಾತ್ಯತೀತ ಸರ್ಕಾರ ರಚನೆ ದೃಷ್ಟಿಯಿಂದ ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಬೆಂಬಲಿಸಲು ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಐ ವರದಿ ಮಾಡಿದೆ.
ಮಂಗಳವಾರ ತಡರಾತ್ರಿ ನಡೆದ ತಮಿಳುನಾಡು ಕಾಂಗ್ರೆಸ್ ಘಟಕದ ರಾಜಕೀಯ ವ್ಯವಹಾರಗಳ ಸಮಿತಿಯ(ಪಿಎಸಿ) ತುರ್ತು ಸಭೆಯಲ್ಲಿ ಟಿವಿಕೆಗೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ನಿರ್ಧರಿಸಲು ಪಕ್ಷದ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆ ಕರೆದಿದ್ದರು. ಜೂಮ್ ಮೂಲಕ ನಡೆದ ವರ್ಚುವಲ್ ಸಭೆಯಲ್ಲಿ ಹಿರಿಯ ಸದಸ್ಯರು ನಟ, ರಾಜಕಾರಣಿ ವಿಜಯ್ ಅವರನ್ನು ಬೆಂಬಲಿಸುವುದರ ಪರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನಲ್ಲಿ ಜಾತ್ಯತೀತ ಸರ್ಕಾರ ರಚಿಸಲು ಟಿವಿಕೆ ನಾಯಕ ವಿಜಯ್ ಅವರನ್ನು ಬೆಂಬಲಿಸಲು ತಮಿಳುನಾಡು ಕಾಂಗ್ರೆಸ್‌ನ ಪಿಎಸಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಮೂಲಗಳು ದೃಢಪಡಿಸಿವೆ.
ಮಂಗಳವಾರ, ಸ್ವತಃ ವಿಜಯ್ ಅವರು ಕಾಂಗ್ರೆಸ್ ಬೆಂಬಲ ಕೋರಿದ್ದರು. ಈ ಸಂಬಂಧ ರಾಜ್ಯದ ಜನರ ಭಾವನೆಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಗೆ ಎಐಸಿಸಿ ಸೂಚಿಸಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲೂ ಕಾಂಗ್ರೆಸ್ ಮಂಗಳವಾರ ಸಂಜೆ ಸಭೆ ನಡೆಸಿತ್ತು. ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಮತ್ತು ಇತರರು ಭಾಗವಹಿಸಿದ್ದರು.
ಸಭೆ ಬಳಿಕ ಮಾತನಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ನಾಯಕತ್ವವು ದಕ್ಷಿಣದ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶದ ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಿದೆ ಎಂದು ತಿಳಿಸಿದ್ದರು. ವಿಜಯ್ ಮನವಿಯನ್ನು ತಮಿಳುನಾಡು ಜನರ ಭಾವನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧರಿಸುವಂತೆ ಸ್ಥಳೀಯ ನಾಯಕರಿಗೆ ಸೂಚಿಸಿದೆ ಎಂದೂ ಹೇಳಿದ್ದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದ್ದು, ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲು ಅವರಿಗೆ 10 ಶಾಸಕರ ಬೆಂಬಲ ಬೇಕು. ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದ್ದರೆ, ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಸಿಪಿಐ ಮತ್ತು ಸಿಪಿಐ-ಎಂ ತಲಾ ಎರಡು ಸ್ಥಾನಗಳನ್ನು ಹೊಂದಿವೆ. ನಿರ್ಗಮಿತ ಆಡಳಿತ ಪಕ್ಷವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 59 ಸ್ಥಾನಗಳನ್ನು ಗೆದ್ದಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನಗಳನ್ನು ಗೆದ್ದಿದೆ.
