ಕಾರ್ಕಳ: ಕಾರ್ಕಳ ನಿವಾಸಿ ಶಂಕರ ಕುಲಾಲ್ ಅವರ ಮನೆಯಲ್ಲಿ ಕಳ್ಳರು ಪ್ರವೇಶಿಸಿ ಕಪಾಟಿನೊಳಗೆ ಇಡಲಾಗಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 3 ಗ್ರಾಂ ತೂಕದ 3 ಚಿನ್ನದ ಉಂಗುರಗಳು, 3 ಗ್ರಾಂ ತೂಕದ ಚಿನ್ನದ ಬೆಂಡೋಲೆ ಹಾಗೂ 3 ಗ್ರಾಂ ತೂಕದ ಜುಮ್ಕಿಯನ್ನು ಕಳವು ಮಾಡಿಕೊಂಡು ಹೋಗಿದ್ದು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಳವಾದ ಚಿನ್ನದ ಒಟ್ಟು ಮೌಲ್ಯ 2,64,000 ಎಂದು ಅಂದಾಜಿಸಲಾಗಿದೆ.
ಈ ಕುರಿತು ಶಂಕರ ಕುಲಾಲ್ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2026 ಅಡಿಯಲ್ಲಿ BNS 2023ರ ಕಲಂ 331(3), 331(4) ಹಾಗೂ 305 ಅನ್ವಯ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ ಅವರ ನೇತೃತ್ವದಲ್ಲಿ ನಡೆದು ಆರೋಪಿ ಆನಂದ ಕುಲಾಲ್ (40) ಅವರನ್ನು ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಬಂಧಿಸಲಾಗಿದೆ. ಜೊತೆಗೆ, ಕಳವು ಮಾಡಿದ ಚಿನ್ನವನ್ನು ಖರೀದಿಸಿದ ಜಯರಾಮ ಆಚಾರ್ಯ (54) ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಒಟ್ಟು 39 ಗ್ರಾಂ ತೂಕದ, ಅಂದಾಜು ರೂ. 5,60,000 ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
