ಉಡುಪಿ: ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ ಹಿನ್ನೆಲೆ ಕರವೇ ಪ್ರತಿಭಟನೆ, ಕಾರ್ಯಕರ್ತರ ವಶಕ್ಕೆ

 


ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ವಿಚಾರವನ್ನು ಮುಂದಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದ ಘಟನೆ ಶುಕ್ರವಾರ ನಡೆದಿದೆ.

ಉಡುಪಿ ಜಿಲ್ಲೆಯ ಉದ್ಯಾವರ ಬಲೈಪಾದೆ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಕಾರ್ಯಕರ್ತರು ಸಿದ್ಧತೆ ನಡೆಸಿದ್ದ ವೇಳೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯಪ್ರವೇಶಿಸಿದರು. ಪ್ರತಿಭಟನೆ ಆರಂಭವಾಗುವ ಮುನ್ನವೇ ಇಪ್ಪತ್ತಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.



ಜೋಸೆಫ್ ವಿಜಯ್ ಅವರ ಆಗಮನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕೊಲ್ಲೂರಿಗೆ ಆಗಮಿಸುವ ಮುನ್ನವೇ ಪ್ರತಿಭಟನಾ ನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣದಲ್ಲಿಟ್ಟರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.