ಕೊನೆಗೂ ನೂತನ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ ಗಳಿಸಿದ ವಿಜಯ್

ಚಿತ್ರ ಕೃಪೆ- ಸತೀಶ್ ಆಚಾರ್ಯ

ಚೆನ್ನೈ: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚಿಸುವ ಕಸರತ್ತಿನಲ್ಲಿ ಕೊನೆಗೂ ವಿಜಯ್ ಯಶಸ್ವಿಯಾಗಿದ್ದು, ಕಾಂಗ್ರೆಸ್, ವಿಸಿಕೆ, ಸಿಪಿಐ ಹಾಗೂ ಸಿಪಿಐ(ಎಂ) ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಬಹುಮತದ ಮೈತ್ರಿ ಸರ್ಕಾರ ರಚಿಸಲು ಸಿದ್ಧವಾಗುವ ಮೂಲಕ ಕಳೆದ ಕೆಲವು ದಿನಗಳ ರಾಜಕೀಯ ಹಗ್ಗಜಗ್ಗಾಟಕ್ಕೆ ತೆರೆಬೀಳುವಂತಾಗಲಿದೆ ಎಂದು ವರದಿ ತಿಳಿಸಿದೆ.

ಟಿವಿಕೆ ಮೂಲಗಳ ಪ್ರಕಾರ, ಶುಕ್ರವಾರ (ಮೇ 08) ಸಂಜೆ 4-30ಕ್ಕೆ ರಾಜ್ಯಪಾಲರನ್ನು ಭೇಟಿಯಾಗಲು ವಿಜಯ್ ಅವರು ಅನುಮತಿ ಕೇಳಿದ್ದು, ಪ್ರಮುಖ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿಸಿದೆ.

ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗುವ ವೇಳೆಯಲ್ಲಿ ವಿಸಿಕೆ, ಸಿಪಿಐ ಹಾಗೂ ಸಿಪಿಐಎಂ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಔಪಚಾರಿಕವಾಗಿ ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

ಮ್ಯಾಜಿಕ್ ಸಂಖ್ಯಾಬಲ:

ವಿಜಯ್ ಪಕ್ಷ ಚುನಾವಣೆಯಲ್ಲಿ 107 ಸ್ಥಾನಗಳನ್ನು ಪಡೆದಿದೆ. ಅಲ್ಲದೇ ಕಾಂಗ್ರೆಸ್ ನ 05, ಸಿಪಿಐ 02, ಸಿಪಿಐ(ಎಂ) 2 ಹಾಗೂ ವಿಕೆಯ 02 ಶಾಸಕರು ಬೆಂಬಲ ನೀಡಲು ಒಪ್ಪಿಗೆ ಸೂಚಿಸಿಸುವ ಮೂಲಕ ಸರ್ಕಾರ ರಚಿಸಲು ಅಗತ್ಯವಿರುವ 118 ಸ್ಥಾನಗಳ ಬೆಂಬಲ ಪಡೆದುಕೊಂಡಂತಾಗಿದೆ. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ತಲೆದೋರಿದ್ದ ಬಿಕ್ಕಟ್ಟು ಕೊನೆಗೊಂಡಂತಾಗಿದೆ.