ಉಡುಪಿ: ಕೇವಲ ಕರಾವಳಿಯ ಮೀನು ತಿನ್ನಲು ಕ್ಯಾಬಿನೆಟ್ ಸಭೆ: ಯತ್ನಾಳ್ ಲೇವಡಿ

 


ಉಡುಪಿ: ಕರಾವಳಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ. ಸಭೆ ಕರೆದು ಏನು ಮಾಡಲಾಗುತ್ತದೆ? ಕೇವಲ ಕರಾವಳಿಯ ಮೀನು ತಿನ್ನಲು ಕ್ಯಾಬಿನೆಟ್ ಸಭೆ ನಡೆಸಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ ನೂರಾರು ಕೋಟಿ ರೂ.ಗಳ ಆಶ್ವಾಸನೆ ನೀಡಿದ್ದರು. ಆದರೆ ಅವುಗಳಲ್ಲಿ ಒಂದೂ ಈಡೇರಿಲ್ಲ ಎಂದು ಯತ್ನಾಳ್ ಆರೋಪಿಸಿದರು. ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್‌ಗಾಗಿ ಸಭೆ ನಡೆಸಲಾಗುತ್ತಿದೆ.

ವಿಧಾನಸಭೆಯಲ್ಲಿ ಕರಾವಳಿ ಭಾಗದ ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚಿಸುತ್ತಾರೆ. ಆದರೆ ಈವರೆಗೆ ಎಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಘೋಷಣೆಗಳು ಕಾರ್ಯರೂಪಕ್ಕೆ ಬರಬೇಕು ಎಂದರು.


ರಾಜ್ಯದಲ್ಲಿ ಮುಂದುವರಿದಿರುವ ವಂದೇ ಮಾತರಂ ವಿವಾದದ ಕುರಿತು ಮಾತನಾಡಿದ ಯತ್ನಾಳ್, ಕೆಪಿಸಿಸಿ ಅಧ್ಯಕ್ಷರಿಗೆ ಪಾಕಿಸ್ತಾನದ ಬಗ್ಗೆ ಹೆಚ್ಚು ಕಾಳಜಿಯೇ ಅಥವಾ ಕರ್ನಾಟಕದ ಬಗ್ಗೆ ಕಾಳಜಿಯೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.

ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಹಿಂದುಗಳು ಹಾಗೂ ದೇಶದ ಪರವಾಗಿ ಒಂದಾದರೂ ಹೇಳಿಕೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು. ವಂದೇ ಮಾತರಂ ಹೇಳುವುದರಲ್ಲಿ ತಪ್ಪೇನಿದೆ? ದೇಶಕ್ಕೆ ತಾಯಿಯ ಗೌರವ ನೀಡುವುದರಲ್ಲಿ ಕೋಮು ಗಲಭೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷರು ಇಂತಹ ಹೇಳಿಕೆ ನೀಡುವುದರ ಹಿಂದೆ ರಾಹುಲ್ ಗಾಂಧಿ ಅವರ ಕುಮ್ಮಕ್ಕಿದೆ ಎಂದು ಯತ್ನಾಳ್ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಹಾಗೂ ರಷ್ಯಾ ಅಧ್ಯಕ್ಷರ ಮುಂದೆ ದೇಶದ ಗೌರವ ಕಾಪಾಡಿಕೊಂಡು ನಡೆದುಕೊಂಡಿದ್ದಾರೆ. ಮೋದಿ ಅವರು ಬಗ್ಗಿದರು, ಅಮೆರಿಕದವರ ಮುಂದೆ ಬಗ್ಗಿದರು ಎಂಬ ಟೀಕೆ ಸರಿಯಲ್ಲ ಎಂದರು.

ಗಣೇಶೋತ್ಸವ ಮೆರವಣಿಗೆಗೆ ಪ್ರತ್ಯೇಕ ನಿಯಮ: ಯತ್ನಾಳ್ ಆಕ್ಷೇಪ

ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಜಿಲ್ಲೆಗೆ ಒಂದೊಂದು ರೀತಿಯ ಆದೇಶ ನೀಡಲಾಗುತ್ತಿದೆ ಎಂದು ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಡಿಜೆ ಪರವಾನಗಿ ಇಲ್ಲ, ಟಿ. ನರಸೀಪುರದಲ್ಲಿ ಮಸೀದಿ ಮುಂದೆ ಮೆರವಣಿಗೆ ಹಾಗೂ ಪಟಾಕಿಗೆ ಅವಕಾಶವಿಲ್ಲ. ಆದರೆ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರ ಕಟೌಟ್‌ಗಳನ್ನು ರಾಜ್ಯದಲ್ಲಿ ಬೇಕಾಬಿಟ್ಟಿಯಾಗಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಗೃಹ ಸಚಿವರ ಜಿಲ್ಲೆಯಲ್ಲೇ ಅನುಮತಿ ಇಲ್ಲದಿದ್ದರೂ ಪ್ರಮುಖ ರಸ್ತೆಗಳಲ್ಲಿ ಕಟೌಟ್‌ಗಳನ್ನು ಹಾಕಲಾಗಿದೆ. ಡಿಜೆಗೂ ಅನುಮತಿ ಪಡೆಯದೆ ಬಳಸಲಾಗುತ್ತಿದೆ ಎಂದು ಹೇಳಿದರು.

ಗಣೇಶೋತ್ಸವಕ್ಕೆ ಮಾತ್ರ ನಿಯಮಗಳನ್ನು ವಿಧಿಸಲಾಗುತ್ತಿದೆ. ಮುಸ್ಲಿಮರ ಹಬ್ಬಗಳಿಗೆ ಯಾವುದೇ ನಿಯಮಗಳಿಲ್ಲ ಎಂದು ಆರೋಪಿಸಿದ ಯತ್ನಾಳ್, ರಾಜ್ಯದಲ್ಲಿ ಇಂತಹ ತಾರತಮ್ಯದ ಸಂಸ್ಕೃತಿ ಬೆಳೆದಿದ್ದು, ಇದನ್ನು ಎದುರಿಸಲು ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.