ಮಣಿಪಾಲದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಯುವಕ ಬಂಧನ


 

ಮಣಿಪಾಲ: ಮಣಿಪಾಲದ WGSHA ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಅವರ ಪುತ್ರಿ ಪೌಲಾ ಲೆಸ್ಲಿ ವಾರ್ಜ್ರಿ (ವಿದ್ಯಾರ್ಥಿನಿ) ಅವರು 2025ರ ನವೆಂಬರ್ 7ರ ರಾತ್ರಿ 11.45ರಿಂದ ನವೆಂಬರ್ 8ರ ಬೆಳಗ್ಗೆ 8.40ರ ನಡುವಿನ ಅವಧಿಯಲ್ಲಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಐರಿಸ್ ಪ್ಲಾಜಾ ಕಟ್ಟಡದ ಕೊಠಡಿ ಸಂಖ್ಯೆ 504ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಮಣಿಪಾಲ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಅಂತಿಮ ವರದಿ ಸಲ್ಲಿಸಿ ಪ್ರಕರಣ ಮುಕ್ತಾಯಗೊಳಿಸಲಾಗಿತ್ತು. ಬಳಿಕ ಮೃತೆಯ ಐಫೋನ್, ಐಪ್ಯಾಡ್, ಡೈರಿ ಸೇರಿದಂತೆ ಡಿಜಿಟಲ್ ದಾಖಲೆಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದಾಗ ಸಾಯಿ ಭಿಂಗಾರೆ ಅಲಿಯಾಸ್ ಸಾಯಿ ಪಾಟೀಲ್ ಎಂಬಾತನೊಂದಿಗೆ ಸ್ನ್ಯಾಪ್‌ಚಾಟ್ ಮೂಲಕ ನಡೆದಿದ್ದ ಸಂವಹನಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತ ವಿದ್ಯಾರ್ಥಿನಿಗೆ ನಿರಂತರ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್‌ಮೇಲ್ ಮಾಡಿರುವ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಮಣಿಪಾಲ ಠಾಣೆಯಲ್ಲಿ ಕಲಂ 308(5) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಸೂಚನೆಯಂತೆ ಪಿಎಸ್‌ಐ ತಿಮ್ಮೇಶ್ ಬಿ.ಎನ್. ತನಿಖೆ ಕೈಗೊಂಡು, ಆರೋಪಿಯಾಗಿರುವ ಸಾಯಿ ಸಂಜಯ್ ಬಿಂಗಾರೆ (21), ಸಂಜಯ್ ಬಿಂಗಾರೆ ಅವರ ಪುತ್ರ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್-ದಿಯು ಕೇಂದ್ರಾಡಳಿತ ಪ್ರದೇಶದ ನಿವಾಸಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.