ಉಡುಪಿ: ಸಾಹಿತ್ಯ ಸಮ್ಮೇಳನ ನಿರಾತಂಕ: ಕೋರ್ಟ್ ಆದೇಶ



ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ  ಭಾನುವಾರ ವೈದ್ಯ ಸಾಹಿತಿ ಕಲಾವಿದ ಡಾ.ಭಾಸ್ಕರಾನಂದಕುಮಾರ್ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಿರಾತಂಕವಾಗಿ ನಡೆಯಲಿದೆ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ.‌ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರಿಗೆ    ಹೈಕೋರ್ಟ್ ತಡೆ ನೀಡಿದ್ದು ನ್ಯಾ. ಸಚಿನ್ ಶಂಕರ್ ಮಗದುಮ್ ಸುಸಾಂಗ ಕಾರ್ಯಕ್ರಮಕ್ಕೆ ಅವಕಾಶ ನೀಡಿ ಆದೇಶ ನೀಡಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಹಿತ ಸಮ್ಮೇಳನದ ಕಲಾಪಗಳಿಗೆ ಅಡ್ಡಿಪಡಿಸದಂತೆ ತೀರ್ಪು ನೀಡಿದ್ದು, ರವಿರಾಜ್  ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಕಸಾಪ ಜಿಲ್ಲಾ ಘಟಕದಿಂದ ‌ಕಳೆದ ನಾಲ್ಕು ವರ್ಷಗಳ ಹಿಂದೆ ನಿಯೋಜಿತರಾದ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಅವರು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸರಣಿ ನೋಟಿಸ್ ಜಾರಿ ಮಾಡಿದ್ದು, ಅದಕ್ಕೆ ಪೂರಕ ಮಾಹಿತಿಗಳನ್ನು ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ನೀಡಿರುವುದಾಗಿ ತಿಳಿಸಿದ್ದಾರೆ. ಆದರೂ ತೃಪ್ತರಾಗದ ಅಡಿಗ ಅವರು ರವಿರಾಜ್ ಅವರನ್ನು ಪದಚ್ಯುತಗೊಳಿಸಿ, ಅವರ ಸ್ಥಾನಕ್ಕೆ ಪೂರ್ಣಿಮಾ ಸುರೇಶ್ ಅವರನ್ನು ನಿಯೋಜಿಸಿದ್ದರು. ಆದರೆ, ಪೂರ್ಣಿಮಾ ಅವರು ಉಡುಪಿ ಕಸಾಪ ತಾಲೂಕು ಅಧ್ಯಕ್ಷತೆಯನ್ನು ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.

ಈ ಮಧ್ಯೆ, ಜಿಲ್ಲಾಧ್ಯಕ್ಷರ ಕ್ರಮವನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ರವಿರಾಜ್ ಅವರೇ ಅಧ್ಯಕ್ಷರಾಗಿ ಮುಂದುವರಿಯುವಂತೆ ಹಾಗೂ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು.

ಆದರೂ ರವಿರಾಜ್ ಎಚ್.ಪಿ. ಅಧ್ಯಕ್ಷತೆಯಲ್ಲಿ ನಿಯೋಜಿತ ಸಾಹಿತ್ಯ ಸಮ್ಮೇಳನ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸದಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿತ್ತು. ಆ ಬಗ್ಗೆ ಉಡುಪಿ ತಾಲೂಕು ಘಟಕ ಉಚ್ಚ ನ್ಯಾಯಾಲಯದಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾ. ಸಚಿನ್ ಶಂಕರ್ ಮಗದುಮ್ ಅವರು ಸಮ್ಮೇಳನ ಯೋಜಿತ ರೀತಿಯಲ್ಲಿ ನಡೆಯುವಂತೆ ಅವಕಾಶ ಕಲ್ಪಿಸಿದ್ದು, ಅಗತ್ಯಬಿದ್ದಲ್ಲಿ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆಯೂ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಅಧ್ಯಕ್ಷರಾಗಿ ರವಿರಾಜ್ ಎಚ್. ಪಿ. ಮುಂದುವರಿಯುವಂತೆಯೂ ಆದೇಶ ನೀಡಿದ್ದಾರೆ.