ಉಡುಪಿ: ಜಿಲ್ಲೆಯಲ್ಲಿ 32 ಅಕ್ರಮ ಹೋಂಸ್ಟೇ ಕಾರ್ಯಾಚರಣೆ- ಕ್ರಮಕ್ಕೆ ಶಿಫಾರಸು : ಎಸ್ಪಿ



ಉಡುಪಿ: ಇತ್ತೀಚೆಗೆ ಕೊಡಗು ಜಿಲ್ಲೆಯ ಹೋಂಸ್ಟೇ ಒಂದರಲ್ಲಿ ನಡೆದ ವಿದೇಶಿ ಮಹಿಳೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಈ ವೇಳೆ ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇ ಇರುವುದು ಕಂಡುಬಂದಿದೆ. 

ಈ 32 ಅಕ್ರಮ ಹೋಂಸ್ಟೇ ವಿರುಧ್ದ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ವರದಿ ನೀಡಲಾಗಿದೆ.



ಹೋಂಸ್ಟೇ/ರೆಸಾರ್ಟ್ ಗಳು ಪರವಾನಿಗೆ ನಿಯಮ ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಹಾಗೂ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವ ಹೋಂಸ್ಟೇ/ರೆಸಾರ್ಟ್ ಗಳ ಪರವಾನಿಗೆಯನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದು.ಹೋಂಸ್ಟೇ/ರೆಸಾರ್ಟ್ ಗಳಿಗೆ ಯಾವುದೇ ವಿದೇಶಿಯರು ಆಗಮಿಸಿದಾಗ ನಿಯಾಮಾನುಸಾರ ಅವರ ವಿವರಗಳನ್ನು ಒಳಗೊಂಡ Form C ಯನ್ನು FRRO(Foreigners Regional Registration Office) online ಮೂಲಕ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಈ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.



ಹೋಂಸ್ಟೇ/ರೆಸಾರ್ಟ್ ಗಳಲ್ಲಿ ವಾಸವಾಗಿರುವ ವಿದೇಶಿಯರ ಭದ್ರತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.