ಪೋಸ್ಟರ್ ರಾಜಕೀಯದ ಬದಲು ಅಭಿವೃದ್ಧಿ ಆಧಾರಿತ ಸ್ಪರ್ಧೆ ನಡೆಯಲಿ: ಅಣ್ಣಾಮಲೈ

 


ಉಡುಪಿ: ರಾಜಕೀಯವು ಕೇವಲ ಪೋಸ್ಟರ್ ಸಂಸ್ಕೃತಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿ ಅಥವಾ ಮಾಜಿ ಮುಖ್ಯಮಂತ್ರಿ ಆಗಮನದ ಪೋಸ್ಟರ್‌ಗಳನ್ನು ಹಾಕುವ ಬದಲು, ಸರ್ಕಾರ ಉಡುಪಿಗೆ ಹಾಗೂ ಕಲ್ಸಂಕಕ್ಕೆ ನೀಡಿದ ಕೊಡುಗೆಗಳೇನು ಎಂಬುದನ್ನು ಜನರಿಗೆ ತಿಳಿಸುವ ಪೋಸ್ಟರ್‌ಗಳು ಕಾಣಿಸಿಕೊಳ್ಳುವಂತಾಗಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ವಿ ದ ಲೀಡರ್ಸ್‌’ ಸಂಸ್ಥಾಪಕ ಅಣ್ಣಾಮಲೈ ಹೇಳಿದರು.

ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ (UMRA) ಆಶ್ರಯದಲ್ಲಿ ಅಜ್ಜರಕಾಡಿನ ಪುರಭವನದಲ್ಲಿ ಶನಿವಾರ ಆಯೋಜಿಸಿದ ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ (AIMRA)ನ ರಾಜ್ಯಮಟ್ಟದ ರಿಟೇಲರ್ಸ್ ಸಮಾವೇಶ ಹಾಗೂ ಸಂಘಟನೆಯ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ನಡುವೆ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಸ್ಪರ್ಧೆ ನಡೆದಾಗ ಮಾತ್ರ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಸರ್ಕಾರದ ಸಾಧನೆಗಳೇ ರಾಜಕೀಯ ಸ್ಪರ್ಧೆಯ ಮಾನದಂಡವಾಗಬೇಕು. ಇಂತಹ ಜವಾಬ್ದಾರಿಯುತ ಸ್ಪರ್ಧಾತ್ಮಕ ರಾಜಕೀಯ ವ್ಯವಸ್ಥೆಯಿಂದ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ರಾಜಕೀಯವು ಹೆಚ್ಚು ಜವಾಬ್ದಾರಿಯುತವಾಗಬೇಕು. ಉಚಿತ ಕೊಡುಗೆಗಳನ್ನು ಘೋಷಿಸಿ ಮತ ಪಡೆಯುವ ರಾಜಕಾರಣಕ್ಕೆ ಸೀಮಿತವಾಗದೆ, ರಾಜ್ಯಕ್ಕೆ ಉತ್ತಮ ಆಡಳಿತ ನೀಡುವತ್ತ ರಾಜಕೀಯ ಪಕ್ಷಗಳು ಗಮನಹರಿಸಬೇಕು ಎಂದು ಹೇಳಿದರು.

ಕರ್ನಾಟಕವು ಇನ್ನಷ್ಟು ಉತ್ತಮ ಆಡಳಿತವನ್ನು ನಿರೀಕ್ಷಿಸುವ ಅರ್ಹತೆಯನ್ನು ಹೊಂದಿದೆ. ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಲದು. ರಾಜ್ಯದ ಒಟ್ಟು ಜಿಡಿಪಿಗೆ ಬೆಂಗಳೂರಿನ ಕೊಡುಗೆ ಶೇ. 65ರಷ್ಟಿದೆ ಎಂಬ ಹಿನ್ನೆಲೆಯಲ್ಲಿ, ವಿಜಯಪುರ, ಕಲಬುರಗಿ, ಗದಗ, ಉಡುಪಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳೂ ಸಮಾನವಾಗಿ ಅಭಿವೃದ್ಧಿಯಾಗಬೇಕು. ಕರ್ನಾಟಕವು ಕೇವಲ ಬೆಂಗಳೂರು ಅವಲಂಬಿತ ರಾಜ್ಯವಾಗದೆ, ಎಲ್ಲ ಪ್ರದೇಶಗಳಲ್ಲೂ ಅಭಿವೃದ್ಧಿ ಸಾಧಿಸುವಂತಾಗಬೇಕು ಎಂದು ಅಣ್ಣಾಮಲೈ ಹೇಳಿದರು.