ಉಡುಪಿ: ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎಂದು ಇತಿಹಾಸವನ್ನೇ ತಿರುಚುವ ಕಾರ್ಯ ಮಾಡಲಾಗುತ್ತಿದೆ- ಮಾವಳ್ಳಿ ಶಂಕರ್



ಉಡುಪಿ: ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎಂದು ಇತಿಹಾಸವನ್ನೇ ತಿರುಚುವ ಕಾರ್ಯ ಮಾಡಲಾಗುತ್ತಿದೆ.  ವಿರೂಪಗೊಳಿಸುತ್ತಿರುವ ನಮ್ಮ ಇತಿಹಾಸವನ್ನು ನಾವು ಮರು ಸೃಷ್ಟಿಸುವ ಕೆಲಸ ಮಾಡಬೇಕಾಗಿದೆ ಎಂದು ದಸಂಸ ಅಂಬೇಡ್ಕರ್ ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.



ಉಡುಪಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕ‌ರ್ ವಾದ) ಹಾಗೂ ಇತರೆ ಸಹಭಾಗಿ ಸಂಘಟನೆ ಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಪ್ರಯುಕ್ತ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ 'ದೇಶಾಭಿಮಾನಿ ಸಮಾವೇಶ'ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸ್ವಾತಂತ್ರ್ಯ ಚಳವಳಿಗೆ ಅನೇಕ ಮಂದಿ ಬಲಿದಾನ ಮಾಡಿದ್ದಾರೆ. ಅವರನ್ನು ಕಳೆದ 14ವರ್ಷಗಳಿಂದ ಇತಿಹಾಸ ದಿಂದ ಅಳಿಸಿ ಹಾಕುವ ಸಂಚುವ ನಡೆಯುತ್ತಿದೆ. ಶಾಲಾ ಪಠ್ಯಗಳನ್ನು ಬದಲಾಯಿಸಲಾಗುತ್ತಿದೆ ಮತ್ತು ನಮ್ಮ ಚಿಂತನೆಗಳನ್ನು ಅಂತ್ಯಂತ ನಾಜೂಕಾಗಿ ವಿರೂಪಗೊಳಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.

ಸಂವಿಧಾನ ಉಳಿವಿಗಾಗಿ ನಾವು ಹೆಚ್ಚು ಹೆಚ್ಚು ಗಟ್ಟಿಯಾಗಬೇಕಾಗಿದೆ. ಎಲ್ಲ ಧರ್ಮೀಯರು ಒಟ್ಟಾಗಿ ಸಮಾಜವನ್ನು ಕಟ್ಟುವ ಕಾರ್ಯ ಮಾಡ ಬೇಕು. ಮನುಷ್ಯ ವಿರೋಧಿ ಚಿಂತನೆಯನ್ನು ಧಿಕ್ಕರಿಸಬೇಕು ಎಂದು ಅವರು ತಿಳಿಸಿದರು.



ಪ್ರಗತಿಪರ ಹೋರಾಟಗಾರ ಕೆ.ಎಲ್.ಅಶೋಕ್ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು. ಸಮಾಜ ಸೇವಕ ಡಾ.ಎಚ್‌.ಎಸ್‌.ಶೆಟ್ಟಿ ಅವರಿಗೆ 25ಸಾವಿರ ರೂ. ನಗದಿನೊಂದಿಗೆ 'ಭೀಮ ಸಾರಥಿ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಪ್ರಶಸ್ತಿ ಜೊತೆ ಸ್ವೀಕರಿಸಿದ ನಗದನ್ನು ಎಚ್.ಎಸ್.ಶೆಟ್ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವಂತೆ ವಾಪಾಸ್ಸು ಸಂಘಟಕರಿಗೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಹಬಾಳ್ವೆ ಉಡುಪಿಯ ಸಂಚಾಲಕ ಪ್ರೊ.ಕೆ.ಫಣಿರಾಜ್‌ ಅಧ್ಯಕ್ಷತೆ ವಹಿಸಿದ್ದರು. ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶಾಮರಾಜ್ ಬಿರ್ತಿ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರನ್ನಾ ದಲಿತ ಹಿರಿಯ ಹೋರಾಟ ಗಾರರಾದ ವಿಠಲದಾಸ್ ಬನ್ನಂಜೆ, ಕರುಣಾಕರ ಮಾಸ್ತ‌ರ್, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಹಬಾಳ್ವೆ ಸಂಘಟನೆಯ ಯಾಸೀನ್ ಮಲ್ಪೆ, ದಸಂಸ ಮಹಿಳಾ ಒಕ್ಕೂಟದ ಗೀತಾ ಸುರೇಶ್, ಮಾನವ ಬಂಧುತ್ವ ವೇದಿಕೆಯ ಶಾಂತಿ ಪಿರೇರಾ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವರೋನಿಕಾ ಕರ್ನೆಲಿಯೋ, ಎಪಿಸಿಆ‌ರ್ ರಾಮಕೃಷ್ಣ ಹೇರ್ಳೆ, ದಲಿತ ಹಕ್ಕುಗಳ ಸಮಿತಿಯ ಸಂಜೀವ ಬಳ್ಕೂರು, ಉಡುಪಿ ತಾಲೂಕು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇರ್ಷಾದ್‌ ನೇಜಾರು, ಸಾಮಾಜಿಕ ಮುಂದಾಳು ಇಕ್ಬಾಲ್ ಮನ್ನಾ, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್, ಎಸ್‌ಐಓನ ಅಫ್ಘಾನ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಸ್ವಾಗತಿಸಿದರು. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಕುಮಾರ್ ಉದ್ಯಾವರ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶಕ್ಕೂ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲ್ಲಿಂದ ಆರಂಭಗೊಂಡ ಜೈ ಭೀಮ್ ಸಾಂಸ್ಕೃತಿಕ ಜಾಥಾಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಚಾಲನೆ ನೀಡಿದರು. ಜಾಥವು ಕೆಎಂ ಮಾರ್ಗ, ಹಳೆ ಡಯಾನ್ ಸರ್ಕಲ್, ಲಯನ್ಸ್‌ ಸರ್ಕಲ್ ಮೂಲಕ ಸಾಗಿ ಸಮಾವೇಶ ನಡೆಯುವ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಮಾಪ್ತಿಗೊಂಡಿತು.