ಉಡುಪಿ: ಮಹಿಳಾ ಪೊಲೀಸ್ ಠಾಣೆಯಲ್ಲಿ ಶಿಶು ಅಕ್ರಮ ಹಸ್ತಾಂತರ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ವೈದ್ಯರು ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಜೂನ್ 19, 2026ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ಉಡುಪಿ ತಾಲೂಕಿನ ಸಂತೆಕಟ್ಟೆ-ನೇಜಾರು ನಿವಾಸಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನಾತ್ಮಕ ಪ್ರಕ್ರಿಯೆ ಇಲ್ಲದೆ ಸಾಕುತ್ತಿದ್ದಾರೆ ಎಂದು ತಿಳಿಸಿದ್ದರು.
ಈ ಮಾಹಿತಿ ಆಧರಿಸಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಸಂತೆಕಟ್ಟೆಯ ಸುಬ್ರಮಣ್ಯ ನಗರದಲ್ಲಿರುವ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ದಂಪತಿ, ಮಗು ಹಾಗೂ ಪೂರ್ಣಿಮಾ ಅವರ ಸಹೋದರಿ ಲಕ್ಷ್ಮಿ ಮನೆಯಲ್ಲಿ ಹಾಜರಿದ್ದರು. ವಿಚಾರಣೆ ವೇಳೆ ಅನುಮಾನಾಸ್ಪದ ಮಾಹಿತಿ ಬೆಳಕಿಗೆ ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಯಿತು.
ತನಿಖೆಯಲ್ಲಿ, ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗದ ಕಾರಣ ಪ್ರಕಾಶ್ ಮತ್ತು ಪೂರ್ಣಿಮಾ ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಸಂದರ್ಭ ಲಕ್ಷ್ಮಿ ಅವರ ಸ್ನೇಹಿತರ ಮೂಲಕ ಆಸ್ಪತ್ರೆಯಲ್ಲಿ ಮಗು ಇರುವ ವಿಚಾರ ತಿಳಿದು, ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಆರೋಪದ ಪ್ರಕಾರ, ಡಾ. ಸುರೇಂದ್ರ ಕಾಮತ್ ಅವರು ಸುಮಾರು ಒಂದು ತಿಂಗಳ ಹಿಂದೆ ಹೆಣ್ಣು ಮಗುವನ್ನು ದಂಪತಿಗೆ ನೀಡಿದ್ದು, ಮಗುವಿನ ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಮಗುವಿನ ಜೈವಿಕ ಪೋಷಕರು ಯಾರು ಎಂಬ ಮಾಹಿತಿ ದಂಪತಿಗೆ ತಿಳಿದಿಲ್ಲ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಆರೋಪಿಗಳು ಅಕ್ರಮ ಲಾಭದ ಉದ್ದೇಶದಿಂದ ಒಳಸಂಚು ರೂಪಿಸಿ, ಮಗುವಿನ ಜನನ ಪ್ರಮಾಣಪತ್ರ ಹಾಗೂ ಪೋಷಕರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಶು ಕಳ್ಳಸಾಗಣೆ ಮತ್ತು ಅಕ್ರಮ ಮಾರಾಟ ನಡೆಸಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 41/2026ರಡಿ BNS ಕಾಯ್ದೆಯ ಕಲಂ 143(4), 61, 318(2), 3(5) ಹಾಗೂ ಜುವೆನೈಲ್ ಜಸ್ಟಿಸ್ ಕಾಯ್ದೆಯ ಕಲಂ 81ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಡಾ. ಕೆ. ಸುರೇಂದ್ರ ಕಾಮತ್ (76), ವೈದ್ಯರು, ಕಾಮತ್ ನರ್ಸಿಂಗ್ ಹೋಮ್, ಉಡುಪಿ ಹಾಗೂ ಎಸ್. ಪ್ರಕಾಶ್ (50), ನೇಜಾರು ಸಂತೆಕಟ್ಟೆ ನಿವಾಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
