ನವದೆಹಲಿ: ಪೆಟ್ರೋಲ್ ದರವನ್ನು ಲೀಟರ್‌ಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71 ಏರಿಕೆ ಮಾಡಲಾಗಿದೆ. ಆ ಮೂಲಕ ಎರಡು ವಾರದೊಳಗೆ ನಾಲ್ಕನೇ ಸಲ ಬೆಲೆ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಮೇ 15ರಿಂದ ಇಂಧನ ಬೆಲೆಯನ್ನು ಹೆಚ್ಚಿಸುತ್ತಿವೆ. ಇದಕ್ಕೂ ಮೊದಲು ಸರಿಸುಮಾರು ನಾಲ್ಕು ವರ್ಷ ಇಂಧನ ಬೆಲೆ ಏರಿಕೆಯಾಗಿರಲಿಲ್ಲ.
ಇದೀಗ ಮೇ 15ರಿಂದ ಇಂಧನ ಬೆಲೆ ಏರಿಕೆಯ ನಂತರ ಎರಡು ವಾರದೊಳಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಸರಿಸುಮಾರು ₹7.5ರಷ್ಟು ಜಾಸ್ತಿ ಆದಂತಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.51ರಿಂದ ₹102.12ಕ್ಕೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ದರ ₹92.49ರಿಂದ ₹95.20ಕ್ಕೆ ಹೆಚ್ಚಳವಾಗಿದೆ.
ಈ ಹಿಂದೆ ಎಷ್ಟು ಹೆಚ್ಚಿಸಲಾಗಿತ್ತು?
ಮೇ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ತಲಾ ₹3 ಮತ್ತು ಮೇ 19 ರಂದು ಲೀಟರ್‌ಗೆ 90 ಪೈಸೆ ಹೆಚ್ಚಿಸಲಾಯಿತು. ಇದರ ನಂತರ ಮೇ 23ರಂದು ಪೆಟ್ರೋಲ್ ಲೀಟರ್‌ಗೆ 87 ಪೈಸೆ ಮತ್ತು ಡೀಸೆಲ್ ದರದಲ್ಲಿ 91 ಪೈಸೆ ಹೆಚ್ಚಿಸಲಾಯಿತು.
ಪರಿಷ್ಕೃತ ದರದಂತೆ ಮುಂಬೈಯಲ್ಲಿ ಲೀಟರ್ ಪೆಟ್ರೋಲ್ ದರವು ₹111.21 ಹಾಗೂ ಡೀಸೆಲ್ ದರವು ₹97.83 ಆಗಿದೆ. ಕೋಲ್ಕತ್ತದಲ್ಲಿ ಕ್ರಮವಾಗಿ ₹113.51 ಹಾಗೂ ₹99.82 ಮತ್ತು ಚೆನ್ನೈಯಲ್ಲಿ ₹107.77 ಹಾಗೂ ₹99.55ಕ್ಕೆ ಏರಿಕೆಯಾಗಿದೆ.
ಪೆಟ್ರೋಲ್, ಡೀಸೆಲ್ ದರದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಇರುತ್ತದೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ ಜಾಗತಿಕ ಹಡಗು ಸಂಚಾರ ಮಾರ್ಗವಾದ ಹೊರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಇಂಧನ ಪೂರೈಕೆ ಸರಪಳಿಗೆ ಅಡಚಣೆಯಾಗಿತ್ತು. ಇದರಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಶೇ 50ರಷ್ಟು ಏರಿಕೆಯಾಗಿದೆ.
