ಚಿನ್ನದ ಆಸೆಯಿಂದ ಪಕ್ಕದಲ್ಲಿ ಮಲಗಿದ್ದ ಸ್ನೇಹಿಯನ್ನೇ ಕೊಲೆ ಮಾಡಲು ಯತ್ನಿಸಿದ ಯುವತಿ ಪೊಲೀಸರ ಅತಿಥಿ !

 


ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಹಾಗೂ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮೇಘಾ ಗೌಡ ಅವರು ತಮ್ಮ ಸ್ನೇಹಿತೆಯರಾದ ನಾಗರತ್ನ, ಗಗನಾ ಹಾಗೂ ಯೋಗಿತಾ ಅವರೊಂದಿಗೆ ಮಣಿಪಾಲ ಶಾಂತಿನಗರದ ಸುದರ್ಶನ ಕಾಂಪ್ಲೆಕ್ಸ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇಘಾ ಗೌಡ, ನಾಗರತ್ನ ಮತ್ತು ಗಗನಾ ಅವರು ಮೇ 12ರಂದು ಕೆಲಸಕ್ಕಾಗಿ  ತೆರಳಿದ್ದು, ಮರುದಿನ ಬೆಳಿಗ್ಗೆ ಸುಮಾರು 7.15ಕ್ಕೆ ವಾಪಸ್ಸು ಬಂದಾಗ ಮನೆಯ ಬಾಗಿಲು ಅರೆ ತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ.

ಒಳಗೆ ಪ್ರವೇಶಿಸಿದಾಗ ಯೋಗಿತಾ ನೆಲದ ಮೇಲೆ ರಕ್ತಸ್ರಾವಗೊಂಡ ಸ್ಥಿತಿಯಲ್ಲಿ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿತ್ತು. ಕೂಡಲೇ ಗಾಯಾಳುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಕುರಿತು ಮೇಘಾ ಗೌಡ ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ವಿಚಾರಣೆ ನಡೆಸಿದ ವೇಳೆ, ಪಕ್ಕದ ಕೊಠಡಿಯಲ್ಲಿ ವಾಸವಾಗಿದ್ದ ಸುಷ್ಮಾ ಅಣ್ಣಪ್ಪ ನಾಯ್ಕ (31) ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದು, ಹಣಕಾಸಿನ ತೊಂದರೆ ಹಾಗೂ ಮನೆಯವರ ಒತ್ತಡದಿಂದಾಗಿ ಯೋಗಿತಾಳ ಚಿನ್ನದ ಸರ ಮತ್ತು ಕಿವಿಯ ಬೆಂಡೋಲೆ ಕಳವು ಮಾಡುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ಹೇಳಿದ್ದಾಳೆ. ಮೇ 12ರ ರಾತ್ರಿ ಯೋಗಿತಾಳ ಜೊತೆಗೇ ಮಲಗಿದ್ದ ಆರೋಪಿ, ಬೆಳಗಿನ ಜಾವ ಕಾಂಕ್ರಿಟ್ ಹೋಲೋ ಬ್ಲಾಕ್ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿ, ಬಳಿಕ ಚಿನ್ನದ ಸರ ಹಾಗೂ ಬೆಂಡೋಲೆಗಳನ್ನು ಅಪಹರಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣಕ್ಕೆ ಸಂಬಂಧಿಸಿದ ಚಿನ್ನದ ಸರ ಹಾಗೂ ಬೆಂಡೋಲೆಗಳನ್ನು ವಶಪಡಿಸಿಕೊಂಡಿದ್ದಾರೆ.