ಪಡುಬಿದ್ರಿ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ, 3 ದನಗಳ ರಕ್ಷಣೆ


ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿ, ಮೂರು ದನಗಳನ್ನು ರಕ್ಷಣೆ ಮಾಡಲಾಗಿದೆ.

ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಇನ್ನಾ ಗ್ರಾಮದ ಕಜನಡ್ಕ ಬಳಿ ಪಿಎಸ್ಐ(ತನಿಖೆ) ಅನಿಲ್ ಕುಮಾರ್ ಟಿ ನಾಯ್ಕ್ ಅವರಿಗೆ ಬಂದ ಖಚಿತ ಮಾಹಿತಿಯಂತೆ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ  407 ಟರ್ಬೋ ವಾಹನವನ್ನು ತಡೆದು ಪರಿಶೀಲಿಸಲಾಯಿತು.

ಈ ವೇಳೆ ವಾಹನದಲ್ಲಿ 3 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು. ತಕ್ಷಣ ವಾಹನ ಚಾಲಕ ನಡ್ಸಾಲು ಗ್ರಾಮದ ಅಬ್ಬಾಸ್‌ಗುಡ್ಡೆಯ ಇಸ್ಮಾಯಿಲ್ (42) ಹಾಗೂ ಕರ್ನಿರೆ ಗ್ರಾಮದ ಮಹಮ್ಮದ್ (62) ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಂಧಿತ ಇಸ್ಮಾಯಿಲ್ ವಿರುದ್ಧ ಮಂಗಳೂರಿನ ಬರ್ಕೆ ಠಾಣೆ, ಮುಲ್ಕಿ ಠಾಣೆ, ಬಂಟ್ವಾಳ ನಗರ ಠಾಣೆ, ಸುರತ್ಕಲ್ ಠಾಣೆ, ಕಾರ್ಕಳ ನಗರ ಠಾಣೆ ಹಾಗೂ ಹೆಬ್ರಿ ಠಾಣೆಗಳಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯಡಿ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನ ಹಾಗೂ ರಕ್ಷಣೆ ಮಾಡಿದ ದನಗಳ ಒಟ್ಟು ಅಂದಾಜು ಮೌಲ್ಯ ₹4.25 ಲಕ್ಷ ಎಂದು ಅಂದಾಜಿಸಲಾಗಿದೆ.