ಉಡುಪಿ: ಮಲ್ಪೆ ಉದ್ದಿನಹಿತ್ಲುವಿನಲ್ಲಿ ಬಾವಿ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಕಾರ್ಕಳ ಸಾಣೂರು ನಿವಾಸಿ ಪ್ರಭಾತ್ ಶೆಟ್ಟಿ ಅವರು ಮಧ್ವನಗರ ನಿವಾಸಿ ಚೇತನ್ ಅವರಿಗೆ ಸೇರಿದ ಜಾಗದಲ್ಲಿ ಬಾವಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಕಾಮಗಾರಿಗಾಗಿ ಕೊಪ್ಪಳ ಜಿಲ್ಲೆಯ ಐವರು ಕೂಲಿ ಕಾರ್ಮಿಕರನ್ನು ಕರೆತರಲಾಗಿತ್ತು.
ಗುರುವಾರ ಹಾಗೂ ಶುಕ್ರವಾರ ಬಾವಿಯಿಂದ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದ್ದು, ಶುಕ್ರವಾರ ಸಂಜೆ ಸುಮಾರು 5 ಗಂಟೆ ಸುಮಾರಿಗೆ ರಮೇಶ್ (25) ಎಂಬ ಕಾರ್ಮಿಕ ಬಾವಿಯೊಳಗೆ ಕೆಲಸ ಮಾಡುತ್ತಿದ್ದ ವೇಳೆ ಬಾವಿಯ ದಂಡೆಯ ಮಣ್ಣು ಏಕಾಏಕಿ ಕುಸಿದಿದೆ. ಪರಿಣಾಮ ರಮೇಶ್ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
