ಹೊಸಂಗಡಿ: ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರಿಂದ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆಯಾಗಿದೆ.
ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್‌ಪೋಸ್ಟ್ ಕಡೆಗೆ ಬರುತ್ತಿದ್ದ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ಅದರಲ್ಲಿ ಎರಡು ಎತ್ತುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು.
ಚಾಲಕರನ್ನು ವಿಚಾರಿಸಿದಾಗ, ಜಾನುವಾರುಗಳನ್ನು ಮಾಂಸಕ್ಕಾಗಿ ವಧೆಗೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜಾನುವಾರುಗಳ ಅಂದಾಜು ಮೌಲ್ಯ ₹1,00,000 ಹಾಗೂ ವಾಹನದ ಮೌಲ್ಯ ₹4,00,000 ಆಗಿದೆ.
ಇದೇ ವೇಳೆ, ಈ ವಾಹನದ ಹಿಂಭಾಗದಿಂದ ಕಾರೊಂದು ಅನುಮಾನಾಸ್ಪದವಾಗಿ ಬರುತ್ತಿದ್ದು, ಅದು ಅಕ್ರಮ ಸಾಗಾಟಕ್ಕೆ ಬೆಂಗಾವಲಾಗಿ ಬಂದಿರುವ ಶಂಕೆ ವ್ಯಕ್ತವಾಯಿತು. ಕಾರನ್ನು ನಿಲ್ಲಿಸಿದಾಗ, ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಕಾರಿನಿಂದ ಇಳಿದು ಓಡಿ ಹೋಗಿದ್ದು, ಮತ್ತೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ:ಮುಸ್ತಾಕ್ ಹುಸೇನ್ ಸಾಬ್ ನದಾಫ್ (29),ಸಲೀಂ ಹುಸೇನ್ ಸಾಬ್ ನದಾಫ್ (33) ಮತ್ತು ನದೀಂ ಅಬ್ದುಲ್ ಖಾದರ್ (34)ಎಂಬವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಪಶು ಸಂರಕ್ಷಣಾ ಕಾಯ್ದೆ 2020, ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ ಹಾಗೂ ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
