ಉಡುಪಿ: ಹಿರಿಯಡಕ ರಾಷ್ಟ್ರೀಯ ಹೆದ್ದಾರಿ (169 ಎ) ಸಮೀಪ 5 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಶ್ಯಾಮಿಲಿ ಸಮೂಹ ಸಂಸ್ಥೆಗಳ ಸಹಸಂಸ್ಥೆ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ ಮಂಗಳವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.
ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಜಿ. ಶಂಕರ್ ನೇತೃತ್ವದಲ್ಲಿ ಕುಟುಂಬಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸುವ ಮೂಲಕ ನೂತನ ರೆಸಾರ್ಟ್ ಅನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಯಶಪಾಲ್ ಎ. ಸುವರ್ಣ, ಶಾಲಿನಿ ಜಿ. ಶಂಕರ್, ಶ್ಯಾಮಿಲಿ ನವೀನ್, ನವೀನ್, ಎಸ್.ಕೆ. ಆನಂದ್, ಶಿವ ಎಸ್. ಕರ್ಕೇರ, ಜಗದೀಶ್ ಕಾಂಚನ್, ಗುರುಪ್ರಸಾದ್, ರಾಘವೇಂದ್ರ ಉಪಾಧ್ಯಾಯ, ನಿತಿನ್, ವಿಕಾಸ್, ಶನಾಯ, ಶಾನ್ವಿಕ, ಜ್ಯೋತಿಷ್ಯ ವಿದ್ವಾನ್ ಕಬ್ಯಾಡಿ ಜಯರಾಮ ಆಚಾರ್ಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಭವ್ಯ ಸಭಾಂಗಣ:
ಸುಮಾರು 5 ಎಕರೆ ವಿಶಾಲ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ ನಿರ್ಮಾಣಗೊಂಡಿದೆ. ಇದು ಶಾನ್ವಿಕ ಕನ್ವೆನ್ಷನ್ ಸೆಂಟರ್, ಶನಾಯ ಗ್ರ್ಯಾಂಡ್ ಡೈನಿಂಗ್ ಹಾಲ್, ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್, ಸ್ಪ್ರಿಂಗ್ಸ್ ಪ್ರೀಮಿಯಂ ರೂಮ್ ಗಳನ್ನು ಒಳಗೊಂಡಿದೆ.
ಶ್ಯಾಮಿಲಿ ಸ್ಪ್ರಿಂಗ್ಸ್ ವಿಶೇಷತೆಗಳು: ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾನಿಯಂತ್ರಿತ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕನ್ವೆನ್ಷನ್ ಸೆಂಟರ್‌ಯನ್ನು ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕೆನ್ನುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ. ಮದುವೆ, ಸೀಮಂತ, ಸಭೆ, ಸಮಾರಂಭ, ಕಾರ್ಪೋರೇಟ್ ವಲಯದ ಬೋರ್ಡ್ ರೂಮ್, ಪಾರ್ಟಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ವಿಶಾಲ ಭೂ ಪ್ರದೇಶದಲ್ಲಿ ಪಾರ್ಕಿಂಗ್, ಮಕ್ಕಳ ಆಟದ ಮೈದಾನ, ತೆರೆದ ಸಭಾಂಗಣಗಳನ್ನು ಹೊಂದಿದೆ ಎಂದು ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಜಿ. ಶಂಕರ್ ತಿಳಿಸಿದರು.
1000 ಆಸನದ ಕನ್ವೆನ್ಷನ್ ಸೆಂಟರ್:
ಸಂಪೂರ್ಣ ಹವಾನಿಯಂತ್ರಿತ 1000 ಮಂದಿ ಆಸೀನರಾಗುವುದಕ್ಕೆ ಬೇಕಾದ ವ್ಯವಸ್ಥೆವುಳ್ಳ ಶಾನ್ವಿಕ ಕನ್ವೆನ್ಷನ್ ಸೆಂಟರ್, ಊಟಕ್ಕೆ ಪ್ರತ್ಯೇಕವಾಗಿರುವ ಶನಾಯ ಗ್ರ್ಯಾಂಡ್ ಹಾಲ್‌ಗಳಿವೆ. ವೆಜ್ ಹಾಗೂ ನಾನ್‌ವೆಜ್‌ಗೆ ಪ್ರತ್ಯೇಕ ಅಡುಗೆ ಕೋಣೆಯ ವ್ಯವಸ್ಥೆ ಇದೆ. ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಶ್ರೀಪ್ರಸನ್ನ ಗಣಪತಿ ಮಂದಿರವನ್ನು ನಿರ್ಮಿಸಲಾಗಿದೆ ಎಂದರು.
ಮೊದಲ 25 ಜೋಡಿಗೆ ಗಿಫ್ಟ್:
ಶ್ಯಾಮಿಲಿ ಸ್ಪ್ರಿಂಗ್ಸ್ ನಲ್ಲಿ ಮದುವೆಗೆ ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದ್ದು, 6 ಜೋಡಿಗಳು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದೆ. ಏ. 12 ರಂದು ಮೊದಲ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮೇ 3ರಂದು ಉತ್ತರ ಕನ್ನಡ ಮೂಲದ ಕುಮಟಾದ ನವಜೋಡಿ ಡೆಸ್ಟಿನೇಶನ್ ಮ್ಯಾರೇಜ್‌ಗೆ ಬುಕ್ಕಿಂಗ್ ಮಾಡಿಕೊಂಡಿದೆ. ಉದ್ಘಾಟನಾ ಸಮಾರಂಭದ ಪ್ರಯುಕ್ತ ಮೊದಲ 25 ಜೋಡಿಗಳಿಗೆ ವಿಶೇಷ ಗಿಫ್ಟ್ ಅನ್ನು ನೀಡಲಾಗುವುದು ಎಂದು ಅವರು ಘೋಷಿಸಿದರು.
ಶ್ಯಾಮಿಲಿ ಸ್ಪ್ರಿಂಗ್ಸ್ ಅನ್ನು ಕೇವಲ ಆದಾಯ ಗಳಿಸಲು ನಿರ್ಮಿಸಿಲ್ಲ. ಇದರಲ್ಲಿ ಬರುವ ಆದಾಯದ ಒಂದು ಅಂಶವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಈ ಭಾಗದ ಅರ್ಹರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.


