ಉಡುಪಿ: ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಕಾಣೆಯಾಗಿರುವ ಕುರಿತು ಜಿಲ್ಲಾ ಕಂಟ್ರೋಲ್ ರೂಮ್‌ನಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಕ್ಕಪಡೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬಾಲಕನನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ. ಕಾಣೆಯಾಗಿದ್ದ ಬಾಲಕನಿಗಾಗಿ ಅಕ್ಕಪಡೆ ಸಿಬ್ಬಂದಿ ವಿವಿಧೆಡೆ ಹುಡುಕಾಟ ನಡೆಸಿತು. ಈ ವೇಳೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ, ಬಾಲಕ ಮುದ್ದೇಬಿಹಾಳಕ್ಕೆ ತೆರಳುವ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂತು.
ತಕ್ಷಣ ಬಸ್ ಅನ್ನು ನಿಲ್ಲಿಸಿದ ಸಿಬ್ಬಂದಿ, ಬಾಲಕನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಬಳಿಕ ಮುಂದಿನ ಕ್ರಮಕ್ಕಾಗಿ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದರು. ಅಕ್ಕಪಡೆ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಬಾಲಕ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
