ಉಡುಪಿ: ದೆಹಲಿ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬಗ್ಗೆ ಕೇಂದ್ರ ಶಿಕ್ಷಣ ಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ವಿಧ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದು ಅತ್ಯಂತ ಖಂಡನೀಯ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಖಂಡಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದ ಈಗಾಗಲೇ 20 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರೂ ಈ ಲೋಪದ ಹೊಣೆಯನ್ನು ಕೇಂದ್ರ ಹೊರಲು ಸಿದ್ಧವಿಲ್ಲ ˌಪ್ರಶ್ನೆ ಪತ್ರಿಕೆಯನ್ನು ಹಲವಾರು ಜನರು ಹಣ ಪಾವತಿಸಿ ಖರೀದಿಸಿರುವುದನ್ನು ನ್ಯಾಯಾಲಯಕ್ಕೆ ಸಿಬಿಐ ಈಗಾಗಲೆ ಮಾಹಿತಿ ನೀಡಿದೆ. ಬಿಜೆಪಿ ಬೆಂಬಲಿತರೆ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯಕ್ಕೆ ಕೇಂದ್ರದ ನಡೆ ಇಂಬು ಕೊಡುತ್ತದೆ. ಆದ್ದರಿಂದ ಜನರ ಸಂಶಯವನ್ನು ನಿವಾರಿಸುವುದು ಕೇಂದ್ರದ ಕರ್ತವ್ಯ.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ನೀಡಿದೆ. ಜನರ ಧ್ವನಿಯನ್ನು ಆಲಿಸುವ ಬದಲು ಬಲಪ್ರಯೋಗದ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
