ಉಡುಪಿ: ಖಾಸಗಿ ಟಿವಿ ವಾಹಿನಿಯಲ್ಲಿ ನನ್ನ ಬಗ್ಗೆ ಸತ್ಯಕ್ಕೆ ದೂರವಾದ ಹಾಗೂ ಸುಳ್ಳು ಮಾಹಿತಿಯನ್ನು ನೀಡಿ ಚಾನೆಲ್ ನ್ನು ಹಾದಿ ತಪ್ಪಿಸಿ, ನನ್ನ ಅನುಮತಿ ಇಲ್ಲದೆ ನನ್ನ ಖಾಸಗಿ ಸಭೆ ಸಮಾರಂಭದ ವಿಡಿಯೋ ಮತ್ತು ಧ್ವನಿಯನ್ನು ದುರುದ್ದೇಶ ಪೂರ್ವಕವಾಗಿ ನನ್ನ ತೇಜೋವಧೆ ಮಾಡಲು, ಮಾಧ್ಯಮಕ್ಕೆ ಸತ್ಯ ವಿಚಾರವನ್ನು ಮರೆಮಾಚಿ, ನನ್ನ ವಿರುದ್ಧ ಸುದ್ದಿಯೊಂದು ಪ್ರಸಾರವಾಗಿದ್ದು ನನ್ನ ಗಮನಕ್ಕೆ ಬಂದ ಕೂಡಲೇ, ಈ ಸಂಬಂಧ ನಾನು ಸ್ವತಃ ಬೆಂಗಳೂರಿನ ಖಾಸಗಿ ನ್ಯೂಸ್ ಚಾನೆಲ್ ಸ್ಟುಡಿಯೋಗೆ ದಿನಾಂಕ 17/7/2026 ರಂದು ತೆರಳಿ ನನ್ನ ಬಗ್ಗೆ ಪ್ರಸಾರಗೊಂಡ ಸುದ್ದಿ ಬಗ್ಗೆ ಸ್ಪಷ್ಟನೆಯನ್ನು ನೀಡಿರುತ್ತೇನೆ. ಅದು ನನ್ನ ಕರ್ತವ್ಯ ವಾಗಿರುತ್ತದೆ.
ನಾನು ಬಿಂದು ತಂಗಪ್ಪನ್, ನ್ಯಾಯವಾದಿ. "ನನ್ನ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿರುವುದಿಲ್ಲ . ನಾನು ಎಲ್ಲಿಯೂ ತಲೆಮರೆಸಿಕೊಂಡಿಲ್ಲ." ದಿನಾಂಕ 14/7/2026. ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಕಕ್ಷಿದಾರರಾದ ಗೀತಾ ರಾವ್ ಅವರ ಪರವಾಗಿ, ನನ್ನ ಸಹೋದ್ಯೋಗಿ ವಕೀಲರಾದ ಶ್ರೀಯುತ ನೀಲ್ ಪಿರೇರಾ ಅವರೊಂದಿಗೆ ಮಾನ್ಯ ಹೈಕೋರ್ಟ್ ಬೆಂಗಳೂರು ಇಲ್ಲಿ ಜಾಮೀನು ಹಾಗೂ ಮಧ್ಯಂತರ ತಡೆ (Stay) ಕೋರಿ ಹಾಜರಾಗಿರುತ್ತೇನೆ.
ನನ್ನ ವಿರುದ್ಧ ನಡೆಸಲಾಗುತ್ತಿರುವ ಈ ಅಪಪ್ರಚಾರವು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಮಾಡಲಾಗಿರುವ ಚಾರಿತ್ರ್ಯ ವಧೆಯ ಪ್ರಯತ್ನವಾಗಿದೆ.
ನನಗೆ ಈ ಪ್ರಕರಣವನ್ನು ಕೈಬಿಡುವಂತೆ ಸುಮಾರು 15 ದಿನಗಳ ಹಿಂದೆಯೇ ಬೆದರಿಕೆ ಹಾಕಲಾಗಿದ್ದು ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ವಿರುದ್ಧ ನಿರಂತರವಾಗಿ ಸುಳ್ಳು ದೂರುಗಳನ್ನು ನೀಡಿ ನನ್ನ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಧ್ವನಿ ದಾಖಲೆ (Voice Recording) ನನ್ನ ಬಳಿ ಇರುತ್ತದೆ.
ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳಿಂದ ನನಗೆ ನಿರಂತರ ಬೆದರಿಕೆ ಬರುತ್ತಿರುವ ಕುರಿತು ಸುಮಾರು 8 ತಿಂಗಳ ಹಿಂದೆಯೇ ಉಡುಪಿ ಬಾರ್ ಅಸೋಸಿಯೇಷನ್(ರಿ )ಗೆ ಲಿಖಿತ ದೂರು ಸಲ್ಲಿಸಿದ್ದೇನೆ.
ಈ ಪ್ರಕರಣದಿಂದ ಹಿಂದೆ ಸರಿಯದಿದ್ದಲ್ಲಿ ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ವಿಶ್ವಾಸಾರ್ಹ ಮಾಹಿತಿಯೂ ನನಗೆ ಲಭ್ಯವಾಗಿದೆ. ಈ ಕುರಿತು ಅಗತ್ಯ ಕಾನೂನು ಕ್ರಮ ಮುಂದಿನ ದಿನಗಳಲ್ಲಿ ಕೈಗೊಳ್ಳುತ್ತೇನೆ.
"ನನ್ನ ವಿರುದ್ಧ ಅಪಪ್ರಚಾರ, ಕೊಲೆ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳನ್ನು ಹಾದಿ ತಪ್ಪಿಸಿ ನನ್ನ ಚರಿತ್ರ್ಯ ವಧೆ ಮಾಡಿ ಅಪಪ್ರಚಾರವೆಸಗಿದ್ದವರ ವಿರುದ್ಧ ಕಾನೂನು ಅಡಿಯಲ್ಲಿ ದಾವೆ ಹೂಡಲು ತೀರ್ಮಾನಿಸಿದ್ದೇನೆ. ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಡುವುದು ನನ್ನ ಕರ್ತವ್ಯ ಹಾಗೂ ವಕೀಲ ವೃತ್ತಿಯ ಮೇಲಿನ ನಿಷ್ಠೆಯಾಗಿದೆ. ನನ್ನ ಹೋರಾಟದಲ್ಲಿ ನನಗೆ ಬೆಂಬಲವಾಗಿ ನಿಂತಿರುವ ಎಲ್ಲ ಸಹೋದ್ಯೋಗಿ ವಕೀಲರಿಗೆ, ಬಂಧು-ಬಳಗಕ್ಕೆ ಹಾಗೂ ಹಿತೈಷಿಗಳಿಗೆ ನಾನು ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ನನಗೆ ಭಾರತದ ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಒತ್ತಡ ಅಥವಾ ಬೆದರಿಕೆಗೆ ಮಣಿಯದೆ, ನಾನು ನ್ಯಾಯ ದೊರೆಯುವವರೆಗೆ ನನ್ನ ಹೋರಾಟ ಅಚಲವಾಗಿ ಮುಂದುವರಿಯಲಿದ್ದೇನೆ.
ಸಾರ್ವಜನಿಕರಿಗೆ ಮತ್ತೊಮ್ಮೆ ನನ್ನ ಬಗ್ಗೆ ಪ್ರಸಾರಗೊಂಡ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ನನ್ನ ವಿರುದ್ಧ ಕೆಲವು ವ್ಯಕ್ತಿಗಳು ಮಾಡಿದ ಷಡ್ಯಂತ್ರವೆಂದು ಹೇಳಬಯಸುತ್ತೇನೆ. ಈ ಅಪಪ್ರಚಾರ ಮತ್ತು ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಾನು ನಿರ್ಧರಿಸಿದ್ದೇನೆ ಎಂದು ನ್ಯಾಯವಾದಿ ಬಿಂದು ತಂಗಪ್ಪನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
