ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ: 625.83 ಗ್ರಾಂ ಗಾಂಜಾ ವಶ, ಆರೋಪಿ ಬಂಧನ


 

ಕಾಪು: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ತಾಲೂಕಿನ ಬಡಾ ಗ್ರಾಮದ ಎರ್ಮಾಳುವಿನ ಅನೀಲಾ ಪಾನ್ ಸ್ಟಾಲ್‌ನಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಅಂಗಡಿ ಮಾಲೀಕ ಅನಿಲ್‌ನನ್ನು ವಶಕ್ಕೆ ಪಡೆದು, ಗ್ರಾಹಕರಿಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಸುಮಾರು 625.83 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಸಂಗ್ರಹಿಸಿದ್ದ ರೂ.600 ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಆರೋಪಿ ಅನಿಲ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 84/2026ರಡಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(c) ಹಾಗೂ 20(b)(II)(A) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಸಕ್ತಿವೇಲು ಇ. ಮತ್ತು ಅನಿಲ್ ಕುಮಾರ್ ಟಿ. ನಾಯಕ್ ನೇತೃತ್ವದಲ್ಲಿ ಎಎಸ್‌ಐ ಗಿರೀಶ್ ಯು.ಆರ್., ಹೆಚ್‌ಸಿ ಕೃಷ್ಣಪ್ರಸಾದ್, ಹೆಚ್‌ಸಿ ಮಿಥುನ್, ಪಿಸಿ ಸಂದೇಶ್ ಭಂಡಾರಿ ಹಾಗೂ ಪಿಸಿ ರಾಘವೇಂದ್ರ ದಾಳಿಯಲ್ಲಿ ಪಾಲ್ಗೊಂಡಿದ್ದರು. ಉಡುಪಿ ಜಿಲ್ಲಾ ಎಸ್‌ಒಸಿಒ ಅಧಿಕಾರಿಗಳು ಮಾದಕ ವಸ್ತು ಪರೀಕ್ಷೆ ನಡೆಸಿ ತನಿಖೆಗೆ ಸಹಕರಿಸಿದರು.

ಬಂಧಿತ ಆರೋಪಿ ಅನಿಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.