ಹಾರ್ಮುಜ್ ಮಾರ್ಗವನ್ನು ಮತ್ತೆ ಬಂದ್ ಮಾಡಿದ ಇರಾನ್ ! ಇಸ್ರೇಲ್ ನಿಂದ ಲೆಬನಾನ್ ಮೇಲೆ ಭಾರೀ ದಾಳಿ - ಕದನವಿರಾಮ ಉಲ್ಲಂಘನೆ ಆರೋಪ




ಟೆಹ್ರಾನ್: ಘೋಷಣೆಯಾಗಿರುವ ಕದನ ವಿರಾಮವನ್ನು ಉಲ್ಲಂಘಿಸಿ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ ಪರಿಣಾಮ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿ ಮಾರ್ಗವನ್ನು ಮತ್ತೆ ಬಂದ್ ಮಾಡಿದೆ. ಅಲ್ಲದೆ, ಅದನ್ನು ದಾಟಲು ಮುಂದಾಗಿದ್ದ ಹಡಗುಗಳನ್ನು ತಡೆಹಿಡಿದಿದೆ ಎಂದು ತಿಳಿದುಬಂದಿದೆ.

ಕದನ ವಿರಾಮ ಘೋಷಣೆ ಬಳಿಕ ಸ್ಥಗಿತದಿಂದಾಗಿ ಹಾರ್ಮುಜ್ ಮಾರ್ಗ ಮುಕ್ತವಾಗಿ ಭಾರತ ಸೇರಿದಂತೆ ಅನೇತ ರಾಷ್ಟ್ರಗಳಿಗೆ ತೈಲಾನಿಲ ತತ್ವಾರ ನೀಗಬಹುದು ಎಂಬ ನಿರೀಕ್ಷೆ ನಡುವಲ್ಲೇ ಈ ಬೆಳವಣಿಗೆ ಮುಳ್ಳಾಗಿ ಪರಿಣಮಿಸಿದೆ.

ಲೆಬನಾನ್‌ ಗುರಿಯಾಗಿಸಿ ಇಸ್ರೇಲ್ ಪಡೆಗಳು ಭಾರೀ ಬಾಂಬ್ ದಾಳಿ ನಡೆಸಿದ್ದು, ಈ ದಾಳಿಗಳನ್ನು ಇರಾನ್ ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.

ಪೂರ್ವ ಸೂಚನೆ ಇಲ್ಲದೆ ಹಲವಾರು ಜನನಿಬಿಡ ವಾಣಿಜ್ಯ ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 300 ಜನರು ಸಾವನ್ನಪ್ಪಿದ್ದು, 1200 ಜನರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಮೂಲಭೂತ ಸೌಲಭ್ಯಗಳಿಗೂ ತೀವ್ರ ಹಾನಿ ಸಂಭವಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇದರ ಬೆನ್ನಲ್ಲೇ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇದು ಜಾಗತಿಕ ತೈಲ ಮಾರುಕಟ್ಟೆ ಮೇಲೆ ತಕ್ಷಣ ಪರಿಣಾಮ ಬೀರಿದೆ. ತೈಲ ಬೆಲೆಗಳು ಏರಿಕೆ ಕಂಡು, ಜಾಗತಿಕವಾಗಿ ಕಚ್ಚಾ ತೈಲವನ್ನು ಸಾಗಿಸುವ ಕಂಪನಿಗಳು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿವೆ.