ಮತ್ತೆ 2 ವಾರ ಮಿಲಿಟರಿ ಕಾರ್ಯಾಚರಣೆ ಸ್ಥಗಿತ - ಟ್ರಂಪ್ ಘೋಷಣೆ



ವಾಷಿಂಗ್ಟನ್: ಒಂದೇ ರಾತ್ರಿಯೊಳಗೆ ಇರಾನ್ ನಾಗರೀಕತೆ ನಾಶ ಮಾಡುವುದಾಗಿ ಬೆದರಿಸಿದ್ದ ಟ್ರಂಪ್ ತಣ್ಣಗಾಗಿದ್ದಾರೆ. ಇರಾನ್ ಮೇಲೆ ನಡೆಯುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂಬ ಮಾಹಿತಿ ಅಮೆರಿಕ ಹಾಗೂ ಇಸ್ರೇಲ್ ಮಾಧ್ಯಮ ವರದಿಗಳಲ್ಲಿ ಪ್ರಕಟವಾಗಿದೆ. ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ಬಗ್ಗೆ CNN ವರದಿ ಮಾಡಿದೆ. ಇಸ್ರೇಲ್ ನ ಸರಕಾರಿ ಮಾಧ್ಯಮ 'ಕಾನ್' ಕೂಡ ಇಸ್ರೇಲ್ ಕದನ ವಿರಾಮಕ್ಕೆ ಸಮ್ಮತಿಸಿದೆ ಎಂದು ತಿಳಿಸಿದೆ.

ದಾಳಿ ತಡೆಗೆ ಮಾನವ ಸರಪಳಿ

ಅಮೆರಿಕ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮಾನವ ಸರಪಳಿಯಂತೆ ನಿಲ್ಲುವಂತೆ ನಾಗರಿಕರಿಗೆ ಇರಾನ್ ಸರ್ಕಾರ ಕರೆ ನೀಡಿತ್ತು.

“ನಾವೆಲ್ಲರೂ ಕೈಗೆ ಕೈ ಜೋಡಿಸಿ ನಿಲ್ಲೋಣ, ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧ ಎನ್ನುವುದನ್ನು ಸಾರೋಣ' ಎಂದು ಇರಾನ್‌ನ ಯುವ ಮತ್ತು ಕ್ರೀಡಾ ಸಚಿವಾಲಯದ ಉಪ ಸಚಿವ ಅಲಿರೆಜಾ ರೆಹಿಮಿ ಹೇಳಿದ್ದಾರೆ.

ಈ ಮೂಲಕ ಅಮೆರಿಕದ ಎಂಥಹದ್ದೇ ದಾಳಿಗೂ ನಾವು ಹೆದರುವುದಿಲ್ಲ, ಇರಾನ್‌ ಜನ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬ ಸಂದೇಶವನ್ನು ಸಾರಲು ಮುಂದಾಗಿದೆ ಇರಾನ್. ಇರಾನ್ ಕರೆಗೆ ಓಗೊಟ್ಟಿರುವ ಅಲ್ಲಿನ ನಾಗರಿಕರು ,ಲಕ್ಷಾಂತರ ಸಂಖ್ಯೆಗಳಲ್ಲಿ ಮಾನವ ಸರಪಳಿ ಮಾಡಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.