ಕಾಪು: ಟೈಮಿಂಗ್ ವಿಚಾರಕ್ಕೆ ಕಾಪುವಿನಲ್ಲಿ ಎರಡು ಖಾಸಗಿ ಬಸ್ ಸಿಬ್ಬಂದಿ ನಡುವೆ ಗಲಾಟೆ; ನಾಲ್ವರು ವಶಕ್ಕೆ


 

ಕಾಪು: ಬಸ್ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಎರಡು ಖಾಸಗಿ ಬಸ್‌ಗಳ ಚಾಲಕರು ಮತ್ತು ಕಂಡಕ್ಟರ್‌ಗಳು ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಗಲಾಟೆ ನಡೆಸಿದ ಘಟನೆ ಸೋಮವಾರ ಬೆಳಿಗ್ಗೆ ಕಾಪು ಹೊಸ ಮಾರಿಗುಡಿ ಅಂಡರ್‌ಪಾಸ್‌ ಸಮೀಪದ ಬಸ್ ನಿಲ್ದಾಣದ ಎದುರು ನಡೆದಿದೆ.

ಜುಲೈ 27ರಂದು ಬೆಳಿಗ್ಗೆ 9.27ರ ಸುಮಾರಿಗೆ KA 20 AB 5493 ನೋಂದಣಿಯ ಸಂದೇಶ್ ಬಸ್ ಹಾಗೂ KA 19 AE 1095 ನೋಂದಣಿಯ ಆನಂದ್ ಬಸ್ ಸಿಬ್ಬಂದಿ ಟೈಮಿಂಗ್ ವಿಚಾರಕ್ಕೆ ಪರಸ್ಪರ ಬಸ್‌ಗಳನ್ನು ತಾಗಿಸಿಕೊಂಡು, ಕೈಕೈ ಮಿಲಾಯಿಸಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 89/2026 ದಾಖಲಿಸಲಾಗಿದ್ದು, ಬಿಎನ್‌ಎಸ್‌ನ ಸೆಕ್ಷನ್‌ಗಳು 281, 194(2), 292, 324(4), 115(2), 352 ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಆರೋಪಿತರಾದ ಬಸ್ ಚಾಲಕರಾದ ರಮೇಶ್ ಮತ್ತು ಅಭಿಷೇಕ್, ಕಂಡಕ್ಟರ್‌ಗಳಾದ ವಿಜಯಕುಮಾರ್ ಹಾಗೂ ಹರೀಶ್ ಬಿ. ಹೆಗ್ಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ ಎರಡು ಬಸ್‌ಗಳನ್ನೂ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.