ವಿಶೇಷ ಮಕ್ಕಳ 'ಕಲಾ ಸೌರಭ' -2026 ವಿಶೇಷ ಕುಸುಮಗಳ ಕೌಶಲಗಳ ಕಲರವ




ಉಡುಪಿ: ಜನಿಸುವ ಮಕ್ಕಳಲ್ಲಿ ಶೇ.2ರಷ್ಟು ಬುದ್ಧಿಮಾಂದ್ಯತೆ ಕಂಡುಬರುತ್ತಿದ್ದು, ವೈದ್ಯಕೀಯ ಸೌಲಭ್ಯಗಳಿಂದ ಮಾತ್ರ ಅವರ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಇಂತಹ ಮಗು ಜನಿಸಿತಲ್ಲ, ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲವೇ ಎಂದು ಪಾಲಕರು ನೊಂದುಕೊಳ್ಳುವುದು ಸಹಜ. ಆದರೆ, ಈ ನಕಾರತ್ಮಕ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಇಂತಹ ಮಕ್ಕಳ ಸೇವೆ ಮಾಡಲು, ನಿಸ್ವಾರ್ಥ ಬುದ್ಧಿ ತೋರ್ಪಡಿಸಲು ದೇವರು ಕೊಟ್ಟ ಅವಕಾಶವೆಂದು ಭಾವಿಸಬೇಕು. ನಂಬಿಕೆ ಕಳೆದುಕೊಳ್ಳದೆ ಭರವಸೆಯೊಂದಿಗೆ ಮುಂದಿನ ಹೆಜ್ಜೆ ಇಡಬೇಕು ಎಂದು ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ನ ಸಿಇಒ ಸವಿತಾ ಸುಲುಗೋಡು ಕಿವಿಮಾತು ಹೇಳಿದರು.



ಉಡುಪಿಯ ಶ್ರೀನಾರಾಯಣ ಗುರು ಆಡಿಟೋರಿಯಂನಲ್ಲಿ ಆಟಿಸಂ ಸೊಸೈಟಿ ಉಡುಪಿ (ರಿ.) ವತಿಯಿಂದ ಹಾಗೂ ಮಣಿಪಾಲದ ಟಿಎಂಜಿ ಸುನಿಧಿ ಫೌಂಡೇಷನ್​ ಟ್ರಸ್ಟ್​, ಮಣಿಪಾಲ ಪೇಮೆಂಟ್​ ಆ್ಯಂಡ್​ ಐಡೆಂಟಿಟಿ ಸೆಲ್ಯೂಷನ್​, ಡಾ. ಎ.ವಿ. ಬಾಳಿಗಾ ಮೆಮೋರಿಯಲ್​ ಹಾಸ್ಪಿಟಲ್​ ದೊಡ್ಡನಗುಡ್ಡೆ, ಕಮಲ್​ ಎ. ಬಾಳಿಗಾ ಚಾರಿಟೇಬಲ್​ ಟ್ರಸ್ಟ್​ (ರಿ.) ಮುಂಬಯಿ, ಒನ್​ ಗುಡ್​ ಸ್ಟೆಪ್​ ಬೆಂಗಳೂರು (ರಿ.) ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶೇಷ ಶಾಲೆಗಳ  ವಿಶೇಷ ಕುಸುಮಗಳ ಕೌಶಲಗಳ ಕಲರವ 'ಕಲಾ ಸೌರಭ-2026' ಉದ್ಘಾಟಿಸಿ ಮಾತನಾಡಿದರು.



"ವಿಶೇಷ ಮಕ್ಕಳ ಕೌಶಲಗಳ ಶೋ ಕೇಸ್​ ಮಾಡಲು ಇದು ಪ್ರಮುಖ ವೇದಿಕೆ. ದಿವ್ಯಾಂಗರನ್ನೂ ಸಹ ಎಲ್ಲರಂತೆ ಕಾಣಬೇಕು, ಅವರಿಗೆ ಪ್ರೋತ್ಸಾಹ, ಸಹಕಾರ ನೀಡಬೇಕು ಎಂಬ ಸಂದೇಶ ಹಾಗೂ ಇಂತಹ ಮಕ್ಕಳನ್ನು ಹೊಂದಿರುವ ಪಾಲಕರೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ" ಎಂದು ಡಾ. ಎ.ವಿ. ಬಾಳಿಗಾ ಮೆಮೋರಿಯಲ್​ ಹಾಸ್ಪಿಟಲ್​ನ ನಿರ್ದೇಶಕ ಡಾ. ಪಿ.ವಿ ಭಂಡಾರಿ ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಡಾ. ಪಿ.ವಿ ಭಂಡಾರಿ ಅವರು ವಾರ್ಷಿಕ ಚಟುವಟಿಕೆಯ ಕೈಪಿಡಿ ಬಿಡುಗಡೆ ಮಾಡಿದರು.  

ಒನ್​ ಗುಡ್​ ಸ್ಟೆಪ್​ನ ಅಲ್ಕಾ ಪೈ, ಹರ್ಷ ಗ್ರೂಪ್​ ಆ್​ ಇನ್​ಸ್ಟಿಟ್ಯೂಟ್​ನ ಸೂರ್ಯಪ್ರಕಾಶ್​, ಗೀತಾ ಫೌಂಡೇಷನ್​ ಕೋಟದ ಮೆನೇಜಿಂಗ್​ ಟ್ರಸ್ಟಿ ಆನಂದ್​ ಸಿ. ಕುಂದರ್​, ಸಂವೇದ ಪೋಷಕರ ಬೆಂಬಲ ಗುಂಪಿನ ಅಧ್ಯಕ್ಷ ವಿಠ್ಠಲ ಭಕ್ತ ಉಪಸ್ಥಿತರಿದ್ದರು.

ನಾರಾಯಣ ವಿಶೇಷ ಶಾಲೆ ತಲ್ಲೂರಿನ ವಿದ್ಯಾರ್ಥಿ ಅನುರಾಗ್​ ನಾಯಕ್​ ಆಶಯ ಗೀತೆ ಹಾಡಿದರು. ಪದ್ಮಾ ರಾವೇಂದ್ರ ಸ್ವಾಗತಿಸಿದರು. ಆಟಿಸಂ ಸೊಸೈಟಿ ಉಡುಪಿ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಗಮನ ಸೆಳೆದ ದಿವ್ಯಾಂಗರ ಪ್ರತಿಭೆ

ಸೃಷ್ಟಿಯಲ್ಲಿ ಯಾವುದೇ ತಪ್ಪಿಲ್ಲ, ನೋಡುವ ದೃಷ್ಟಿಯಲ್ಲಿ ತಪ್ಪಿದೆ ಎನ್ನುವುದನ್ನು ಪ್ರತಿಪಾದಿಸುವ ರೀತಿಯಲ್ಲಿ ದಿವ್ಯಾಂಗ ಮಕ್ಕಳು ವಿವಿಧ ಪ್ರತಿಭೆ ತೋರ್ಪಡಿಸಿದರು. ಮಗುವಿನ ಕುರಿತು ಕನಸು ಹೊತ್ತಿದ್ದ ತಾಯಿಗೆ ತನ್ನ ಕೂಸು ಬುದ್ಧಿಮಾಂದ್ಯವೆಂದು ತಿಳಿದ ತಾಯಿಯ ತಲ್ಲಣ, ಸಮಾಜದ ಧೋರಣೆ ಬಿಂಬಿಸುವ ಕಿರು ಪ್ರಹಸನವನ್ನು ಮುನಿಯಾಲು ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಡಾ. ನಿಶಾ ಪ್ರದರ್ಶಿಸಿದರು. ಆಟಿಸಂ ಮಕ್ಕಳ ಪಾಲಕರಿಗೆ ಮಾರ್ಗದರ್ಶನ ನೀಡಲು ಬೆಂಗಳೂರಿನ ಸೃಷ್ಟಿ ಸ್ಪೆಷಲ್​ ಅಕಾಡೆಮಿಯ ಸ್ಥಾಪಕಿ ಸುಚಿತ್ರಾ ಸೋಮಶೇಖರಯ್ಯ ಅವರು 'ಹವ್ಯಾಸ ಆಧಾರಿತ ಕಾರ್ಯಗಳಿಂದ ಸುಸ್ಥಿರ ವೃತ್ತಿಪರ ಮಾದರಿಗಳತ್ತ ಪಯಣ' ವಿಷಯ ಕುರಿತು ಹಾಗೂ ಬೆಂಗಳೂರಿನ ಸೆವಾ&ಇನ್​&ಆಕ್ಷನ್​ನ ಸಹ ನಿರ್ದೇಶಕಿ ತುಳಸಿ ಅವರು 'ನಮ್ಮ ನಂತರ ಮುಂದೇನು? ಪಾಲಕರ ಆತಂಕ&ಪರಿಹಾರ' ಕುರಿತು ಸಂವಾದದೊಂದಿಗೆ ಉತ್ತಮ ಮಾಹಿತಿ ನೀಡಿದರು.