![]() |
| ಸಾಂದರ್ಭಿಕ ಚಿತ್ರ |
ಮಣಿಪಾಲ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸಲಾದ ಜೆಇಇ ಮೈನ್ಸ್ ಪರೀಕ್ಷೆಯ ವೇಳೆ ಅಕ್ರಮವಾಗಿ ಪ್ರಶ್ನೆಪತ್ರಿಕೆ ಹೊರಗೆ ಕಳುಹಿಸಲು ಯತ್ನಿಸಿದ ಘಟನೆ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ.
ಜವಹಾರ್ ನವೋದಯ ವಿದ್ಯಾಲಯ, ಚಾರ ಹೆಬ್ರಿ (ಕಾರ್ಕಳ ತಾಲೂಕು) ಸಹಾಯಕ ಪ್ರಾಂಶುಪಾಲರಾದ ವಿ.ಕೆ. ಮನೋಹರ್ ಕುಮಾರ್ (53) ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಅವರು ಮೇ 5 ರಂದು ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಐಒಎನ್ ಡಿಜಿಟಲ್ ಜೋನ್, ಮಣಿಪಾಲದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರಿವೀಕ್ಷಕರಾಗಿದ್ದರು.
ಪರೀಕ್ಷಾ ಕೇಂದ್ರದ ವೆನ್ಯು ಕಮಾಂಡಿಂಗ್ ಅಧಿಕಾರಿ ಮನೋಜ್ ಕುಮಾರ್ ಆಗಿದ್ದು, ಮಹೇಶ್ ನಾಯ್ಕ ಅವರು ಅಡ್ಮಿನ್ ಮ್ಯಾನೇಜರ್ ಆಗಿದ್ದರು. ಪರೀಕ್ಷೆಯನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಗಳಲ್ಲಿ ನಡೆಸಲಾಗಿದ್ದು, ಬೆಳಿಗ್ಗೆ 149 ವಿದ್ಯಾರ್ಥಿಗಳು ಹಾಗೂ ಮಧ್ಯಾಹ್ನ 133 ವಿದ್ಯಾರ್ಥಿಗಳು ಹಾಜರಾಗಿದ್ದರು. ಮಧ್ಯಾಹ್ನ 3:00 ಗಂಟೆಗೆ ಪರೀಕ್ಷೆ ಆರಂಭವಾಗಿತ್ತು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಹಾಲ್ ಟಿಕೆಟ್ ತರಲು ಅನುಮತಿ ಇತ್ತು. ಈ ವೇಳೆ ಉತ್ತರಾಖಂಡ ಮೂಲದ ಅರೀದಮಾನ್ ಸಿಂಗ್ ಸಾಂಗ್ ಎಂಬ ವಿದ್ಯಾರ್ಥಿ ಲ್ಯಾಬ್ 'ಎ' ಕೇಂದ್ರದ ಸಿಸ್ಟಮ್ ಸಿ-018ರಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾಗ, ಮೊಬೈಲ್ ಫೋನ್ ಬಳಸಿ ಕಂಪ್ಯೂಟರ್ನಲ್ಲಿದ್ದ ಪ್ರಶ್ನೆಪತ್ರಿಕೆಯನ್ನು ಫೋಟೋ ತೆಗೆದು ಹೊರಗೆ ಕಳುಹಿಸಲು ಯತ್ನಿಸಿರುವುದು ಪತ್ತೆಯಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2026ರಡಿ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆ ಕಾಯ್ದೆ 2024ರ ಕಲಂ 03, 04, 10 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ
