ಉಡುಪಿ: ಉಡುಪಿಯ ಮಲ್ಪೆ ಸಮೀಪದ ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ಮಲ್ಪೆ ಮಾಲ್ತಿದ್ವೀಪದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ವಿಶೇಷ ಪೂಜೆ ನಡೆಯುತ್ತದೆ. ಈ ಪೂಜೆಯು ಮಲ್ಪೆ ಸಮುದ್ರ ತೀರದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಮಾಲ್ತಿದ್ವೀಪದಲ್ಲಿರುವ ಶ್ರೀ ಆದಿಪರಾಶಕ್ತಿ ಸನ್ನಿಧಾನದಲ್ಲಿ ನಡೆಯುತ್ತದೆ.
ಈ ದ್ವೀಪದಲ್ಲಿರುವ ದೇವಿಯ ಸನ್ನಿಧಾನವು ಕೊಡವೂರು ಶಂಕರನಾರಾಯಣ ದೇವಸ್ಥಾನಕ್ಕೆ ಸಂಬಂಧಪಟ್ಟ ಆದಿ ದೇವಸ್ಥಾನ ಎಂದು ನಂಬಲಾಗಿದೆ. ವರ್ಷಕ್ಕೊಮ್ಮೆ ಮಕರ ಸಂಕ್ರಾಂತಿಯಂದು ಮಾತ್ರ ಇಲ್ಲಿ ದೇವಸ್ಥಾನದ ವತಿಯಿಂದ ಸಾರ್ವಜನಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನದ ಅರ್ಚಕರು ಮತ್ತು ಭಕ್ತರು ಬೋಟ್ ಮೂಲಕ ದ್ವೀಪಕ್ಕೆ ತೆರಳಿ ಅಲ್ಲಿರುವ ದೇವಿಯ ವಿಗ್ರಹಕ್ಕೆ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆಗಳನ್ನು ನೆರವೇರಿಸುತ್ತಾರೆ.
ಸಮುದ್ರ ಮಧ್ಯದ ದ್ವೀಪದಲ್ಲಿ ನಡೆಯುವ ಈ ಪೂಜೆಯನ್ನು ವೀಕ್ಷಿಸಲು ನೂರಾರು ಭಕ್ತರು ಸಾಂಪ್ರದಾಯಿಕ ದೋಣಿ ಹಾಗೂ ಬೋಟ್ಗಳ ಮೂಲಕ ದ್ವೀಪಕ್ಕೆ ಆಗಮಿಸುತ್ತಾರೆ.ಭಕ್ತರು ಮಲ್ಪೆ ಬಂದರಿನಿಂದ ಲಭ್ಯವಿರುವ ದೋಣಿ ಅಥವಾ ಬೋಟ್ ಸೇವೆಗಳನ್ನು ಬಳಸಿಕೊಂಡು ಮಾಲ್ತಿದ್ವೀಪವನ್ನು ತಲುಪಿದರು.ಬಳಿಕ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.


