35ನೇ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರ ಸಮಾರೋಪ : ದುಶ್ಚಟಗಳಿಂದ ದೂರವಿದ್ದು ಭಾವನಾತ್ಮಕ ಬೆಳವಣಿಗೆ ಹೊಂದಿ: ಡಾ. ನಿ.ಬೀ. ಬಲ್ಲಾಳ್



ಉಡುಪಿ: ದುಶ್ಚಟಗಳಿಂದ ದೂರವಿದ್ದು ಆರೋಗ್ಯಯುತ ಜೀವನದ ಹಾದಿಯಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ನೆಲೆಯಲ್ಲೂ ಬೆಳೆಯಬೇಕು ಎಂದು ಅಂಬಲಪಾಡಿ ಶ್ರೀ ಶ್ರೀಜನಾರ್ದನ ಮತ್ತು ಶ್ರೀಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ಎನ್. ಬಿ. ವಿಜಯ್ ಬಲ್ಲಾಳ್ ಹೇಳಿದ್ದಾರೆ. 

ಅವರು ಮುಂಬಯಿಯ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ದೊಡ್ಡಣಗುಡ್ಡೆ ಡಾ. ಎ. ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ಆಶ್ರಯದಲ್ಲಿ ದೊಡ್ಡಣಗುಡ್ಡೆಯ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ ಎ. ಬಾಳಿಗಾ ಸಭಾಂಗಣದಲ್ಲಿ ಶನಿವಾರ ನಡೆದ  35ನೇ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ 10ದಿನಗಳ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.   

ಬದ್ಧತೆ, ಗುಣಮಟ್ಟದ ಕೆಲಸದಿಂದ ಗುರಿ ಸಾಧನೆ ಸಾಧ್ಯ. ಪ್ರೀತಿ, ವಿಶ್ವಾಸ, ಸಾಮರಸ್ಯದ ಬದುಕು ನಮ್ಮದಾಗಬೇಕು. ಪರಿವರ್ತಿತ ಬದುಕಿನಲ್ಲಿ ಸಾಗಲು ಕುಡಿತಕ್ಕೆ ಮತ್ತೆ ಶರಣಾಗದಂತೆ ಮನೆ ಮಂದಿಯೂ ಎಚ್ಚರ ವಹಿಸಬೇಕು  ಎಂದು ನುಡಿದರು. 

ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಿ, ಮದ್ಯ ತೊರೆದವರು ಹಸಿವು, ಸಿಟ್ಟು, ಏಕಾಂಗಿತನ, ಸುಸ್ತು ಸಂದರ್ಭ ಜಾಗರೂಕತೆ ವಹಿಸಬೇಕು. ಮನೆ ಮಂದಿ ಜವಾಬ್ದಾರಿ ಅರಿತು ಎಚ್ಚರ ವಹಿಸಿ ಪ್ರೀತಿಯಿಂದ ನೋಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. 

ಶಿಬಿರಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ಖಜಾಂಚಿ ಡಾ. ಸನತ್ ರಾವ್ ಉಪಸ್ಥಿತರಿದ್ದರು. ಸ್ನಾತಕೋತ್ತರ ವೈದ್ಯೆ ಡಾ. ಪೌಷಾಲಿ ಮಾತನಾಡಿದರು. 

ವೃತ್ತಿಪರ ಚಿಕಿತ್ಸಕಿ ಪೂರ್ಣಿಮಾ ಪ್ರಾರ್ಥಿಸಿದರು. ಮನೋವೈದ್ಯ ಡಾ. ಮಾನಸ್ ಇ.ಆರ್.ಸ್ವಾಗತಿಸಿದರು. ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ವರದಿ ವಾಚಿಸಿದರು. ಮನಶಾಸ್ತ್ರಜ್ಞ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ವಂದಿಸಿದರು.