![]() |
| ಆಶಾ ರಘು : ಚಿತ್ರ ಫೇಸ್ ಬುಕ್ |
ಬೆಂಗಳೂರು: ಕಾದಂಬರಿಕಾರ್ತಿ ಹಾಗೂ ಕಿರುತೆರೆ, ಬೆಳ್ಳಿತೆರೆಯಲ್ಲಿ ನಟಿಯಾಗಿ, ಸಂಭಾಷಣೆಕಾರ್ತಿಯಾಗಿ, ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಆಶಾ ರಘು ಅವರು ನಿಧನರಾಗಿದ್ದಾರೆ..ಇವರಿಗೆ 47 ವರ್ಷ ವಯಸ್ಸಾಗಿತ್ತು.
ಆಶಾ ಅವರ ಪತಿ ರಘು ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ರಘು ಅವರು ಕರ್ನಾಟಕದ ಖ್ಯಾತ ಆಹಾರ ತಜ್ಞರಾಗಿದ್ದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿತ್ತು. ರಘು ಕನಸಿನಲ್ಲಿ ಬಂದರು ಎಂದು ಅವರು ಪೋಸ್ಟ್ ಹಾಕಿದ್ದರು.ಇವರಿಗೆ ಓರ್ವ ಮಗಳಿದ್ದಾಳೆ ಎನ್ನಲಾಗಿದೆ.
ಕಳೆದ ಹತ್ತು ದಿನಗಳ ಹಿಂದೆ ಆಶಾ ಅವರು ಫೇಸ್‌ಬುಕ್‌ನಲ್ಲಿ, ಹೀಗೊಂದು ಕನಸಾಯಿತು… ಇಂದು ಬೆಳಗಿನ ಜಾವ ನನ್ನವರು ಕನಸಿನಲ್ಲಿ ಕಾಣಿಸಿಕೊಂಡರು. ಬಹಳ ಸಹಜವಾಗಿದ್ದರು. ನನಗೆ ಅವರು ತೀರಿಕೊಂಡ ಮೇಲೆ ನೋಡಲು ಬಂದಿದ್ದಾರೆಂಬ ಸಂಪೂರ್ಣ ಅರಿವಿತ್ತು. ಸಡಗರದಲ್ಲಿ ಮಾತನಾಡಿಸಿದೆ. ಉಳಿದವರನ್ನು ಕನಸಿನಲ್ಲೇ 'ಕಾಣ್ತಿದ್ದಾರಾ ನಿಮಗೆ?' ಅಂತೆಲ್ಲಾ ಕೇಳಿದೆ. ಅವರು ತಿಣುಕಾಡಿದರು. ಆದರೆ ಮಗಳು ನೇರವಾಗಿ ಬಂದು ತನ್ನಪ್ಪನನ್ನು ತಟ್ಟಿ, 'How are you?' ಅಂತ ಮಾತನಾಡಿಸಿದಳು. ಅವರೂ ಅವಳೊಂದಿಗೆ ಮಾತನಾಡಿಸಿದರು. ಕನಸಿನಲ್ಲಿ ನನ್ನ ತಲೆಗೂದಲು ತುಂಡಾಗಿತ್ತು. ನನ್ನ ಕೂದಲಲ್ಲಿ ಬೆರಳಾಡಿಸಿ ಯಾವುದೋ ಶ್ಯಾಂಪೂ ಹೆಸರು ಹೇಳಿದರು. ನಾನು ನಕ್ಕೆ. ನಂತರ 'ನಾನು ಈಗ ಫ್ರಾನ್ಸ್‌ಗೆ ಹೋಗ್ತಿದ್ದೀನಿ' ಅಂದರು. 'ಮಾರಿಷಸ್' ಅಂತಾ ಕೂಡಾ ಜೊತೆಗೆ ಸೇರಿಸಿದರೋ ಅಂತ ಅರೆಬರೆ ನೆನಪು. ಇಷ್ಟಾಗುವುದರಲ್ಲಿ ಸಂತೋಷಕ್ಕೆ ಫಳ್ಳನೆ ಕಣ್ಣು ಬಿಟ್ಟುಬಿಟ್ಟೆ! ಸಂತೋಷಕ್ಕೆ ಮೊದಲು, ಆ ನಂತರ ಅವರ ಫೋಟೋ ನೋಡಿಕೊಂಡು ಭಾವವುಕ್ಕಿ ಅತ್ತೂ ಅತ್ತೂ ಕೆಡವಿದೆ. ಫ್ರಾಂಸಿಗೆ ಹೋದರೆ ನಿಜಕ್ಕೂ ಸಿಕ್ಕರೂ ಸಿಗಬಹುದು ಅನ್ನುವ ಲಹರಿಯಲ್ಲಿಯೇ ಇನ್ನೂ ಇದ್ದೇನೆ!" ಎಂದು ಬರೆದುಕೊಂಡಿದ್ದರು. ಇದೀಗ ಅವರ ಈ ಪೋಸ್ಟನ್ನು ಅವರ ಪರಿಚಿತರು ಗೆಳೆಯರು ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ.
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. 'ಆವರ್ತ', ಪೂತನಿ, ಗತ, ಮಾಯೆ, ಚಿತ್ತರಂಗ ಕಾದಂಬರಿಗಳನ್ನು ಬರೆದಿದ್ದರು. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಕಲಾವಿದೆಯಾಗಿ ನಟಿಸಿದ್ದಾರೆ, ಸಂಭಾಷಣೆ ಬರೆದಿದ್ದಾರೆ, ಸಹಾಯಕ ನಿರ್ದೇಶಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ.
ಇವರ ಬರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ತ್ರಿವೇಣಿ ದತ್ತಿನಿಧಿ ಪ್ರಶಸ್ತಿಗಳು ಬಂದಿವೆ.
