ಟಿವಿ9 ಮುಖ್ಯ ಕಚೇರಿಯ ಆಡಳಿತ ಮಂಡಳಿ ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ. ಇದರ ಭಾಗವಾಗಿ 38 ಹಿರಿ ಕಿರಿಯ ಪತ್ರಕರ್ತರು ನೌಕರಿ ಕಳೆದುಕೊಂಡಿದ್ದಾರೆ.ಇದರಲ್ಲಿ ಬಹುತೇಕರು ಕ್ಯಾಮರಾಮನ್ ಗಳೇ ಆಗಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ಅದರಲ್ಲೂ ಪ್ರಾರಂಭದಿಂದ ಜಿಲ್ಲಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಕ್ಯಾಮೆರಾಮನ್ ಗಳನ್ನೂ ನೌಕರಿಯಿಂದ ತೆಗೆಯಲಾಗಿದೆ.ಎರಡು ತಿಂಗಳ ಸಂಬಳದ ಜತೆಗೆ ಬರಬೇಕಿರುವ ಎಲ್ಲಾ ಬಾಕಿಯನ್ನು ನೀಡುವ ಭರವಸೆ ನೀಡಿ ಕೆಲಸದಿಂದ ತೆಗೆದುಹಾಕಲಾಗಿದೆ.ಜುಲೈ 15 ರವರೆಗೆ ಕೆಲಸ ಮಾಡುವ ಅವಕಾಶವನ್ನು ನೀಡಲಾಗಿದೆ.ಇನ್ನು ಹಲವು ಉದ್ಯೋಗಿಗಳ ವರ್ಗಾವಣೆಯೂ ನಡೆದಿದೆ.
ಟಿವಿ 9 ಕನ್ನಡ ನ್ಯೂಸ್ ಚಾನೆಲ್ ಹಿಂದೆಂದೂ ಇಂತಹದ್ದೊಂದು ಕೆಲಸಕ್ಕೆ ಕೈ ಹಾಕಿರಲಿಲ್ಲ. ಸಿಬ್ಬಂದಿಯನ್ನು ಅವರ ದಕ್ಷತೆ-ಕಾರ್ಯಕ್ಷಮತೆ-ಸಾಮರ್ಥ್ಯ ಗುರುತಿಸಿ ಬೆಳೆಸುವ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಾ ಬಂದಿರುವ ಸಂಸ್ಥೆ ಅದು.ಆದರೆ ಈಗ ದೊಡ್ಡ ಮಟ್ಟದಲ್ಲಿ , cost cutting ನೆಪದಲ್ಲಿ ಈ ನಿರ್ಧಾರಕ್ಕೆ ಬಂದಿದೆ.
ಆರ್ಥಿಕ ಸಂಕಷ್ಟವೆ?
ಟಿವಿ 9 ಇವತ್ತಿಗೂ ಕನ್ನಡದ ನಂಬರ್ ಒನ್ ನ್ಯೂಸ್ ಚಾನಲ್.ಸಂಸ್ಥೆ ಸ್ಥಿರವಾಗಿದ್ದು ಲಾಭದಲ್ಲೇ ನಡೆಯುತ್ತಿದೆ.ಆದರೆ ಮೂಲಗಳ ಪ್ರಕಾರ ಟಿವಿ 9 ನೆಟ್ ವರ್ಕ್ ಲಾಸ್ ನಲ್ಲಿದೆ.ಬೇರೆ ಬೇರೆ ರಾಜ್ಯಗಳ ನಷ್ಟವನ್ನು ಸರಿದೂಗಿಸುವ ಕೆಲಸ ನಡೆಯುತ್ತಿದೆ.ಅದರ ಭಾಗವಾಗಿ ಕನ್ನಡ ನ್ಯೂಸ್ ಚಾನಲ್ ಗೆ ಭರ್ಜರಿ ಸರ್ಜರಿ ನಡೆಯುತ್ತಿದೆ.
"ನಂಬರ್ ಒನ್ ಚಾನಲ್ ಪರಿಸ್ಥಿತಿಯೇ ಹೀಗಾದರೆ ,ಉಳಿದ ಚಾನಲ್ ಗಳ ಪರಿಸ್ಥಿತಿ ಹೇಗಿರಬಹುದೋ ಊಹಿಸಿ.ಇತ್ತೀಚೆಗೆ ಸುವರ್ಣ ನ್ಯೂಸ್ ಸಿಬ್ಬಂದಿಯ ಸಂಬಳಕ್ಕೆ ಕತ್ತರಿ ಹಾಕಲಾಗಿತ್ತು.ಕೆಲವು ಚಾನಲ್ ಗಳ ಸಂಬಳ ಮೂರು ತಿಂಗಳಿಗೊಮ್ಮೆ ಆಗುತ್ತದೆ.ಒಂದೆರಡು ಚಾನಲ್ ಗಳಲ್ಲಿ ಸಂಬಳನೇ ಕೊಡುವುದಿಲ್ಲ.ಇನ್ನು , ಚಾನಲ್ ನ ಪತ್ರಕರ್ತರಿಗೆ ಪಿಎಫ್ ಮತ್ತಿತರ ಮೂಲಭೂತ ಸೌಲಭ್ಯ ಇವತ್ತಿಗೂ ಮರೀಚಿಕೆ ! "
- ಹೆಸರು ಹೇಳಲು ಇಚ್ಚಿಸದ ಪತ್ರಕರ್ತ
