ಭಾರತದ ವಿದೇಶಿ ಸಾಲ 72 ಲಕ್ಷ ಕೋಟಿ ರೂಪಾಯಿಗೆ ಏರಿಕೆ: ಆರ್‌ಬಿಐ ಮಾಹಿತಿ

 


ಮುಂಬೈ (ಮಹಾರಾಷ್ಟ್ರ): ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗುವತ್ತ ಭಾರತ ದಾಪುಗಾಲು ಇಟ್ಟಿರುವ ನಡುವೆ ದೇಶದ ಮೇಲಿನ ಸಾಲವೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾರತವು ವಿದೇಶಗಳ ವಿವಿಧ ಮೂಲಗಳಿಂದ ಪಡೆದ ಸಾಲದ ಬಗ್ಗೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಅಂಕಿ ಅಂಶ ನೀಡಿದೆ.

ಭಾರತದ ಒಟ್ಟು ವಿದೇಶಿ ಸಾಲವು 2026ರ ಮಾರ್ಚ್ ಅಂತ್ಯದ ವೇಳೆಗೆ 762.8 ಬಿಲಿಯನ್ (ಸುಮಾರು 72 ಲಕ್ಷ ಕೋಟಿ ರೂಪಾಯಿ) ಯುಎಸ್ ಡಾಲರ್‌ಗೆ ತಲುಪಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 26.3 ಬಿಲಿಯನ್ ಡಾಲರ್‌ನಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

2026ರ ಮಾರ್ಚ್ ಅಂತ್ಯದ ವೇಳೆಗೆ ಭಾರತದ ವಿದೇಶಿ ಸಾಲ ಎಂಬ ವರದಿಯ ಪ್ರಕಾರ, ಭಾರತೀಯ ರೂಪಾಯಿ ಮತ್ತು ಇತರ ಪ್ರಮುಖ ಕರೆನ್ಸಿಗಳ ಎದುರು ಯುಎಸ್ ಡಾಲರ್ ಮೌಲ್ಯ ವೃದ್ಧಿಯಾದ ಕಾರಣ ಸಾಲದ ಮೊತ್ತದಲ್ಲಿ 24.6 ಬಿಲಿಯನ್ ಡಾಲರ್ ವ್ಯತ್ಯಾಸ ಕಂಡು ಬಂದಿದೆ.

ಈ ಕರೆನ್ಸಿ ಮೌಲ್ಯದ ಏರಿಳಿತದ ಪರಿಣಾಮವನ್ನು ಹೊರತುಪಡಿಸಿದರೆ, ಭಾರತದ ವಿದೇಶಿ ಸಾಲವು 26.3 ಬಿಲಿಯನ್ ಡಾಲರ್ ಬದಲಿಗೆ 51 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗುತ್ತಿತ್ತು ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಕೇಂದ್ರೀಯ ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, ದೇಶದ ಒಟ್ಟು ಜಿಡಿಪಿಗೆ ಹೋಲಿಸಿದರೆ ವಿದೇಶಿ ಸಾಲದ ಅನುಪಾತವು ಕಳೆದ ವರ್ಷದ ಮಾರ್ಚ್‌ನಲ್ಲಿದ್ದ ಶೇಕಡಾ 19.8 ರಿಂದ 2026ರ ಮಾರ್ಚ್ ಅಂತ್ಯದ ವೇಳೆಗೆ ಶೇಕಡಾ 20.8 ಕ್ಕೆ ಏರಿಕೆಯಾಗಿದೆ ಎಂದಿದೆ.

ದೀರ್ಘಾವಧಿ - ಅಲ್ಪಾವಧಿ ಸಾಲದ ವಿವರ: ಮಾರ್ಚ್ 2026 ರ ಅಂತ್ಯದ ವೇಳೆಗೆ, ದೀರ್ಘಾವಧಿಯ ಸಾಲ (ಒಂದು ವರ್ಷಕ್ಕಿಂತ ಹೆಚ್ಚಿನ ಮೂಲ ಮುಕ್ತಾಯದೊಂದಿಗೆ) 613.5 ಬಿಲಿಯನ್​ ಡಾಲರ್ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11.6 ಬಿಲಿಯನ್​ ಡಾಲರ್​ ಹೆಚ್ಚಳವಾಗಿದೆ.