ಬೆಂಗಳೂರು:ನಗರದಅರಮನೆ ಮೈದಾನದಲ್ಲಿ ಇಂದು ನಡೆದ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅಧಿಕೃತವಾಗಿ ಪದಗ್ರಹಣ ಮಾಡಿದರು. ಸಿಎಂ ಡಿ.ಕೆ.ಶಿವಕುಮಾರ್ ನೂತನ ಅಧ್ಯಕ್ಷರಿಗೆ ಕಾಂಗ್ರೆಸ್ ಬಾವುಟ ಹಸ್ತಾಂತರಿಸಿದರು.
ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ:
ಪದಗ್ರಹಣದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ನನ್ನ ಜೀವನದ ಮಹತ್ವಪೂರ್ಣ ದಿನ ಇದು. 141 ವರ್ಷಗಳ ಪವಿತ್ರ ಪಕ್ಷ ಕಾಂಗ್ರೆಸ್. ಇದರ ಜವಾಬ್ದಾರಿ ವಹಿಸಿಕೊಳ್ಳಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ, ಸುರ್ಜೆವಾಲಾ ಪ್ರಮುಖ ಕಾರಣ. ಇವರಿಗೆಲ್ಲ ಶತಕೋಟಿ ನಮಸ್ಕಾರ. ಇದು ಪವಿತ್ರವಾದ ಪಕ್ಷ, ಇದು ದೇವಸ್ಥಾನದಲ್ಲೋ, ಮಸೀದಿಯಲ್ಲೋ, ಚರ್ಚಿನಲ್ಲೋ ಇಲ್ಲ. ಬ್ರಿಟಿಷರ ಕೆಳಗಡೆ ಗುಲಾಮಗಿರಿ ಇದ್ದಾಗ ಹೋರಾಟ ಮಾಡಿದೆ. ಹಲವು ಧರ್ಮಗಳು ಇರುವ ಬಹುತ್ವದ ರಾಷ್ಟ್ರ ಇದು. ಮಹಾತ್ಮಾ ಗಾಂಧಿ ಪರಿಕಲ್ಪನೆ ಅಡಿಯಲ್ಲಿ ನಿರ್ಮಾಣವಾದ ರಾಷ್ಟ್ರ ಇದು ಎಂದರು.
ನಮ್ಮ ಮುಂದೆ ದೊಡ್ಡ ಸವಾಲಿದೆ. 2028 ವಿಧಾನಸಭೆ, 2029ರ ಲೋಕಸಭೆ ಚುನಾವಣೆ ಇದೆ. ಸ್ವಾತಂತ್ರ್ಯ ಹೋರಾಟದ ಪರಂಪರೆ ಇರುವ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಕೊಡುಗೆ ಇಲ್ಲದ ಪಕ್ಷ ಬಿಜೆಪಿ, ಆರ್‌ಎಸ್‌ಎಸ್ ನಮ್ಮ ಮುಂದೆ ದೊಡ್ಡ ಸವಾಲನ್ನೇ ತಂದಿಟ್ಟಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ಆಯುಧಗಳಾಗಿ ಮಾಡಿಕೊಂಡಿದ್ದಾರೆ. ತ್ರಿವರ್ಣ ಧ್ವಜದ ವಿರುದ್ದ ಇದ್ದವರು ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದು ಸಂವಿಧಾನವನ್ನೇ ಮುಗಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಜಾತಿ ಕಾಂಗ್ರೆಸ್, ನಮ್ಮ ಪವಿತ್ರ ಧರ್ಮ ಸಂವಿಧಾನ. ದೇಶದಲ್ಲಿ ಯಾವುದೂ ಅಧಿಕೃತ ಧರ್ಮವಿಲ್ಲ. ಯಾರಿಗೂ ಸಹ ಧರ್ಮಾಚರಣೆಗೆ ನಿರ್ಬಂಧ ಇಲ್ಲ. ಯಾವುದೇ ಭಾಷೆ ಮಾತಾಡಲು ನಿರ್ಬಂಧ ಇಲ್ಲ. ಬಿಜೆಪಿ ಆರ್‌ಎಸ್‌ಎಸ್ ಧರ್ಮಾಧಾರಿತ ರಾಜಕಾರಣ ಮಾಡ್ತಿದ್ದಾರೆ. ಇದರಿಂದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ಕುವೆಂಪು ಹೇಳಿದ್ದಾರೆ. ಅದನ್ನು ಸಾಕ್ಷಾತ್ ಜಾರಿ ಮಾಡಲು ನಾವು ಹೋರಾಟ ಮಾಡಬೇಕಿದೆ. ಕೋಮುವಾದ ಹರಡಲು ಯಾರೂ ಬಿಡಬಾರದು ಎಂದು ಕರೆ ನೀಡಿದರು.
ನಾವೇನಾದರೂ ಸ್ವಲ್ಪ ಎಚ್ಚರ ತಪ್ಪಿದರೆ ಪೂರ್ವಜರು ತಂದುಕೊಟ್ಟ ಸ್ವಾತಂತ್ರ್ಯವನ್ನೇ ನಿರ್ನಾಮ ಮಾಡಲು ಕಾಯುತ್ತಿದ್ದಾರೆ. ಗೋಡ್ಸೆ ಒಬ್ಬ ಭಯೋತ್ಪಾದಕ, ಕೊಲೆಗಾರ ಎಂದು ಇದುವರೆಗೆ ಬಿಜೆಪಿ ಹೇಳಿಲ್ಲ. ಖರ್ಗೆ ಅವರು ಹೇಳಿದ ಕಿವಿ ಮಾತಿನಂತೆ ಸಿಎಂ ಡಿಕೆಶಿ ಹಾಗೂ ನಾನು ಒಟ್ಟಿಗೆ ಕೆಲಸ ಮಾಡುತ್ತೇವೆ. ಧೈರ್ಯವಾಗಿ, ಸ್ಥೈರ್ಯವಾಗಿ ಕೆಲಸ ಮಾಡಿ ಮುನ್ನುಗ್ಗಬೇಕು. ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಿ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತತೆಯನ್ನು ಉಳಿಸಿಕೊಳ್ಳುವಂಥ ಕೆಲಸ ಮಾಡುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ನಿಗಮ ಮಂಡಳಿಗೆ ಹೊಸ ನೇಮಕಾತಿ ಮಾಡಿ:ಎರಡೂವರೆ ವರ್ಷ ಆಯ್ತು ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು ಹಾಗೇ ಮುಂದುವರಿದಿದ್ದಾರೆ. ಅವರಿಂದ ರಾಜೀನಾಮೆ ಪಡೆದು ಹೊಸಬರಿಗೆ ಅವಕಾಶ ಕೊಡಿ. ಸಿದ್ದರಾಮಯ್ಯ ಅವರ ಒಂದನೇ ಇನ್ನಿಂಗ್ಸ್ ಆಯ್ತು. ಈಗ ಎರಡನೇ ಇನ್ನಿಂಗ್ಸ್ ಆಡಬೇಕಾದರೆ, ಪಿಚ್ ಹೇಗಿದೆ ಎಂದು ನೋಡಬೇಕಾದರೆ ಹೊಸ ಕಾರ್ಯಕರ್ತರಿಗೆ ಹೊಸ ಜವಾಬ್ದಾರಿ ಕೊಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ನನ್ನ ರಾಜಕೀಯ ಜೀವನದಲ್ಲಿ ವಿಧಾನಸೌಧದಲ್ಲಿ, ಸಂಸತ್ತಿನಲ್ಲಿ ಶಿಫಾರಸು ಪತ್ರ ಇಟ್ಟುಕೊಂಡು ಓಡಾಡಿದವನಲ್ಲ. ನಾನು ದೊಡ್ಡ ಜಾತಿಯಿಂದ ಬಂದವನಲ್ಲ. ಬಂಡವಾಳ ಶಾಹಿ ಅಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಮೇಲೆ ಬಂದಿದ್ದೇನೆ. ಪಕ್ಷ ನಿಷ್ಠೆಯಿಂದ ನೀವು ಇದೇ ತರ ಮೇಲೆ ಬರಬಹುದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಆತ್ಮತೃಪ್ತಿ ಇದೆ, ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದೇನೆ:ಇದೇ ವೇಳೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ಆದ ಮೇಲೆ ಇಷ್ಟು ದೊಡ್ಡ ಮಟ್ಟಿಗೆ ಕಾರ್ಯಕ್ರಮ ಮಾಡುವುದಕ್ಕೆ ಆಗಲಿಲ್ಲ. ಕಾರಣ ಅಂದು ಬಿಜೆಪಿ ಸರ್ಕಾರ ಅವಕಾಶ ಕೊಡಲಿಲ್ಲ. ದಿನೇಶ್ ಗುಂಡೂರಾವ್ ಅವರಿಂದ ನಾನು ಅಧಿಕಾರ ಸ್ವೀಕಾರ ಮಾಡಿದ್ದೆ. ಕೆಲವೊಂದು ತಪ್ಪು ಆಗಿರಬಹುದು. ಆದರೆ, ನನ್ನ ಕೆಲಸ ಆತ್ಮ ತೃಪ್ತಿ ತಂದಿದೆ. ಇವತ್ತು ಬಿ.ಕೆ.ಹರಿಪ್ರಸಾದ್ಗೆ ಅಧಿಕಾರ ಕೊಟ್ಟಿದ್ದೇನೆ. ನಾನು ಸಿದ್ದರಾಮಯ್ಯ ಜೊತೆ ಸೇರಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದೆವು. ಸೋನಿಯಾ ಗಾಂಧಿಯವರ ಆಶೀರ್ವಾದದಿಂದ ಅಧಿಕಾರ ಪಡೆದೆ ಎಂದರು.
