ಮಣಿಪಾಲ: ಡ್ರಿಂಕ್ ಅಂಡ್ ಡ್ರೈವ್ ಅಪಘಾತ ಪ್ರಕರಣ: ಆರೋಪಿ ಬಂಧನ

 



ಉಡುಪಿ: ಮಣಿಪಾಲದಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಜೂನ್ 19, 2026ರಂದು ರಾತ್ರಿ   ಕರ್ವಾಲು ನಿವಾಸಿ ಅಭಿಷೇಕ್ ನಾಯಕ್ (21) ಅವರು ತಮ್ಮ ಸ್ಕೂಟಿಯಲ್ಲಿ ಮಣಿಪಾಲದಿಂದ ಕೆಳಪರ್ಕಳದ ಕಡೆಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 169(A)ಯಲ್ಲಿರುವ ಸಾಯಿಸಾಗರ್ ಹೋಟೆಲ್ ಮುಂಭಾಗದ ಯು-ಟರ್ನ್ ಬಳಿ ತಲುಪಿದಾಗ, ಎಂಐಟಿ ಕಡೆಯಿಂದ ಬಂದ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಆರೋಪಿ ಸಮೇಗ್ದ್ ಎಲ್.ಜೆ. (25) ಮದ್ಯಪಾನ ಮಾಡಿ  ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಪಘಾತದ ಪರಿಣಾಮ ಸ್ಕೂಟಿ ಹಾಗೂ ಕಾರು ಜಖಂಗೊಂಡಿದ್ದು, ಅಭಿಷೇಕ್ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿವೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 99/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(a) ಹಾಗೂ 110ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.