ಬ್ರಹ್ಮಾವರ : ಬೊಕ್ಕಪಟ್ಟ ಹೊನ್ನಾಳ ಸರಕಾರಿ ಉರ್ದು ಶಾಲೆಗೆ ನೂತನ ಬಸ್‌ ಹಸ್ತಾಂತರ



ಹೊನ್ನಾಳ: ಸರಕಾರಿ ಉರ್ದು (ಆಂಗ್ಲ ಮಾಧ್ಯಮ) ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ಟ, ಹೊನ್ನಾಳದಲ್ಲಿ ಶಾಲಾ ಬಸ್‌ ಹಸ್ತಾಂತರ ಸಮಾರಂಭ ಬುಧವಾರ ಶಾಲಾ ವಠಾರದಲ್ಲಿ ನಡೆಯಿತು. ಶಾಲೆಯ ಎಸ್‌ಡಿಎಂಸಿ, ಹಳೆವಿದ್ಯಾರ್ಥಿ ಸಂಘ ಹಾಗೂ ಹೊನ್ನಾಳ ಎಜುಕೇಶನ್ ಆ್ಯಂಡ್ ವೆಲ್‌ಫೇರ್ ಟ್ರಸ್ಟ್‌ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.



ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ರಾಜ್ಯದ ಅನೇಕ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತ ತಲುಪಿರುವ ಸಂದರ್ಭದಲ್ಲಿ ಬೊಕ್ಕಪಟ್ಟ ಸರಕಾರಿ ಉರ್ದು ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಸಂತಸದ ಬೆಳವಣಿಗೆ ಎಂದು ಹೇಳಿದರು.



“ಒಂದು ಕಾಲದಲ್ಲಿ 40ಕ್ಕಿಂತಲೂ ಕಡಿಮೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಇಂದು 112ಕ್ಕೆ ಏರಿಕೆಯಾಗಿದೆ. ಇದು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಹಳೆವಿದ್ಯಾರ್ಥಿಗಳು ಹಾಗೂ ಹೃದಯ ಶ್ರೀಮಂತ ದಾನಿಗಳ ನಿರಂತರ ಸಹಕಾರದಿಂದ ಸಾಧ್ಯವಾಗಿದೆ. ನಮ್ಮ ನಡುವೆ ಸಾಕಷ್ಟು ಹಣವಂತರಿದ್ದರೂ ಸಮಾಜಮುಖಿ ಚಿಂತನೆಯ ಹೃದಯ ಶ್ರೀಮಂತ ದಾನಿಗಳಿದ್ದಾಗ ಮಾತ್ರ ಇಂತಹ ಅಭಿವೃದ್ಧಿ ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದಕ್ಕೆ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಏಸಿ ಬಸ್‌ ವ್ಯವಸ್ಥೆ ಕಲ್ಪಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಕ್ರಾಂತಿಕಾರಿ ಬದಲಾವಣೆಯ ಸಂಕೇತವಾಗಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಾಧನೆಗೆ ಕಾರಣಕರ್ತರಾದ ಎಸ್‌ಡಿಎಂಸಿ ಸದಸ್ಯರು, ಹಳೆವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ ವೃಂದವನ್ನು ಅವರು ಅಭಿನಂದಿಸಿದರು.

ಅನಿವಾಸಿ ಭಾರತೀಯ ಉದ್ಯಮಿ ಅಶ್ಮತ್ ಅಲಿ ಮಾತನಾಡಿ, ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶುಭ ಹಾರೈಸಿದರು. ಬ್ರಹ್ಮಾವರ ಕ್ಲಸ್ಟರ್ ಸಿಆರ್‌ಪಿ ಲಲಿತಾ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಶೂಕುರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ರಾಬಿ ಪಿಂಟೋ ಮಾತನಾಡಿದರು.

ಹೊನ್ನಾಳ ಖಾಖೆಯ ಪೋಸ್ಟ್ ಮಾಸ್ಟರ್ ನಾಗರಾಜ್ ಶೆಟ್ಟಿ, ಶಾಲಾ ಪೋಷಕರಾದ ಖತೀಬ್ ಅಕ್ಬರ್, ಹಳೆವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮುಶ್ತಾಕ್ ಅಹಮದ್, ಮಾಜಿ ಪ್ರಭಾರ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಹಾಗೂ ಮುಷ್ತಾಕ್ ಉಪ್ಪಿನಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷ ಇಮ್ತಿಯಾಝ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.