ನನಗೂ‌ ಡಿಕೆಶಿಗೂ ಯಾವುದೇ ವ್ಯವಹಾರಿಕ ಸಂಬಂಧವಿಲ್ಲ - ಅಡ್ಡಮತದಾನದ ಸತ್ಯಾಸತ್ಯತೆ ಕಾಲವೇ ಹೊರತರುತ್ತದೆ: ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿಕೆ

 


ಬೆಳ್ತಂಗಡಿ, ದಕ್ಷಿಣ ಕನ್ನಡ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡಮತದಾನದ ಹಿಂದೆ ತಾವಿಲ್ಲ. ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯ ಸಂಬಂಧವಿದೆ ಎಂಬ ಆರೋಪವನ್ನು ವಿಜಯೇಂದ್ರ ಇದೇ ವೇಳೆ ತಳ್ಳಿಹಾಕಿದರು.

ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಅಲ್ಲಿಂದ ಮಂಗಳೂರಿಗೆ ಆಗಮಿಸಿ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದಿದ್ದೇನೆ. ‌ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಅಡ್ಡಮತದಾನದಿಂದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಈ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ನನಗೂ ಮಾನಸಿಕವಾಗಿ ನೋವಾಗಿದೆ. ಧರ್ಮಸ್ಥಳದಲ್ಲಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂದು ಭಾವನಾತ್ಮಕವಾಗಿ ಹೇಳಿದ್ದೆ. ಆದರೆ, ಪಕ್ಷದ ಹಿರಿಯರು ಆ ಹಂತಕ್ಕೆ ಹೋಗುವುದು ಬೇಡ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಆ ವಿಚಾರವನ್ನು ಮುಂದುವರಿಸಿಲ್ಲ ಎಂದರು.