ಉಡುಪಿ: ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ದಾನೀಶ್ ಮದನಿ ಮತ್ತು ಕರಾಣಿ ಮುಸೀನ್ ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ ಎಂಬ ಮೂವರು ರೌಡಿಗಳನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಈ ಪೈಕಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ದಾನೀಶ್ ಮದನಿ,( 23 ) ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಾಣಿ ಮುಸೀನ್, ( 44 ) ವಿರುದ್ಧ 7 ಪ್ರಕರಣಗಳು ದಾಖಲಾಗಿದ್ದು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.
ಇನ್ನು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ (36) ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದು ಶಿರ್ವ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.
ಗಡಿಪಾರು ಕ್ರಮಕ್ಕೆ ಒಳಗಾದ ರೌಡಿಗಳು ಕೊಲೆ, ಕೊಲೆಯತ್ನ, ಪೊಲೀಸ್ ಠಾಣೆಗೆ ಕಲ್ಲೆಸೆತ, ಕಳವು, ಜಾನುವಾರು ಕಳವು, ಜಾನುವಾರು ಹತ್ಯೆ, ರೌಡಿಸಂ ಪ್ರವೃತ್ತಿಯ ಹಲ್ಲೆ ಮುಂತಾದ ಪ್ರಕರಣಗಳ ಸಹಿತ ಒಟ್ಟು 30 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.
ಮೊಹಮ್ಮದ್ ದಾನೀಶ್ ಮದನಿ ಎಂಬಾತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ, ಕರಾಣಿ ಮುಸೀನ್ ಎಂಬಾತನನ್ನು ಬೀದರ್ ಜಿಲ್ಲೆಯ ಗಾಂಧಿ ಗಂಜ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಇಲಿಯಾಸ್ ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಕಳೆದ 1 ವರ್ಷದ ಅವಧಿಯಲ್ಲಿ ಅಕ್ರಮ ಚಟುವಟಿಕೆ ಹಾಗೂ ರೌಡಿಸಂನ್ನು ಮಟ್ಟಹಾಕುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ 14 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
