ದೆಹಲಿಯಲ್ಲಿ ಕಾಕ್ರೋಚ್ ಉಗ್ರ ಪ್ರತಿಭಟನೆ ! ಜಂತರ್‌ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ - ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ

 


ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷೆಗಳ ಅಧ್ವಾನಕ್ಕೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಆರಂಭಿಸಿದೆ. ಸಾವಿರಾರು ಸಿಜೆಪಿ ಬೆಂಬಲಿಗರು ಜಂತರ್‌ ಮಂತರ್‌ನಲ್ಲಿ ಸೇರಿದ್ದು, ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ವಿಭಿನ್ನ ಪೋಸ್ಟರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಸಿಜೆಪಿ ಪೋಸ್ಟ್ ಮಾಡಿದೆ. “ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲೇಬೇಕು. ಶಿಕ್ಷಣ ಸಚಿವರನ್ನು ನಾವು ಮತ ಹಾಕಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದ್ದೇವೆ. ನಮ್ಮ ತೆರಿಗೆಯಿಂದ ಅವರಿಗೆ ಸಂಬಳ ಸಿಗುತ್ತದೆ” ಎಂದು ಹೇಳಿದೆ.

ಅವರ ಅಧಿಕಾರಾವಧಿಯಲ್ಲಿ ಲಕ್ಷಾಂತರ ಯುವಕರ ಭವಿಷ್ಯ ಕತ್ತಲೆಯಲ್ಲಿ ತುಂಬಿದೆ. ಕಾಕ್ರೋಚ್‌ಗಳು ಬರುತ್ತಿವೆ, ಧರ್ಮೇಂದ್ರ ಪ್ರಧಾನ್ ಹೋಗುತ್ತಿದ್ದಾರೆ” ಎಂದು ಕಾಕ್ರೋಚ್ ಇಸ್ ಬ್ಯಾಕ್ ಎಕ್ಸ್‌ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಯೊಬ್ಬರು ಮಾತನಾಡಿದ್ದು, “ಪೋಷಕರ ಮಾತು ಮೀರಿ ನಾನು ಇಲ್ಲಿ ಬಂದು ಸೇರಿದ್ದೇನೆ. ಈಗ ನಾನು ಭಾವುಕಳಾಗಿದ್ದೇನೆ. ಯಾಕೆಂದರೆ ಶಿಕ್ಷಣ ನನ್ನ ಹಕ್ಕು ಎಂದು ನನ್ನ ಪೋಷಕರಿಗೆ ನಾನು ಹೇಳಿದೆ. ಇದು ನಮ್ಮ ಮೂಲಭೂತ ಹಕ್ಕು” ಎಂದು ತಿಳಿಸಿದ್ದಾರೆ.

ಇನ್ನು ಸಿಜೆಪಿ ಪ್ರತಿಭಟನೆಯಲ್ಲಿ ಸೇರಿದವರು ವಿಡಿಯೋ, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಾಕ್ರೋಚ್ ಇಸ್ ಬ್ಯಾಕ್ ಖಾತೆಯನ್ನು ಟ್ಯಾಗ್ ಮಾಡುವಂತೆಯೂ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. “ಕಾಕ್ರೋಚ್ ಪಾರ್ಟಿ ಜಿಂದಾಬಾದ್! ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಜಂತರ್ ಮಂತರ್‌ಗೆ ಆಗಮಿಸಲು ಪ್ರಾರಂಭಿಸಿದ್ದಾರೆ. ನೀವೂ ಜಂತರ್ ಮಂತರ್‌ನಲ್ಲಿದ್ದೀರಾ? #cjpprotest ಎಂದು ಹ್ಯಾಷ್‌ಟ್ಯಾಗ್ ಹಾಕಿ ನಿಮ್ಮ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡು ನಮ್ಮನ್ನು ಟ್ಯಾಗ್ ಮಾಡಿ” ಎಂದು ತಿಳಿಸಿದೆ.