ರಾಮಮಂದಿರ ವಿವಾದ : ದೇಶ ವಿದೇಶದ ಶ್ರದ್ದಾಳುಗಳ ಕೇಂದ್ರದಲ್ಲಿ ಇಂತಹ ಘೋರ ಅಪಚಾರ ನಡೆಯಬಾರದಿತ್ತು - ಪೇಜಾವರ ಶ್ರೀ

 


ಉಡುಪಿ: ಉಡುಪಿಯಲ್ಲಿ ಮಾತನಾಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ರಾಮಮಂದಿರದಲ್ಲಿ ಆದ ಅವ್ಯವಹಾರದ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ರಾಮಮಂದಿರ ವಿಶ್ವಸ್ಥ ಮಂಡಳಿ ಟ್ರಸ್ಟ್ ಸದಸ್ಯರೂ ಆಗಿರುವ ಶ್ರೀಗಳು, "ಮಾಧ್ಯಮಗಳಲ್ಲಿ ಬಂದ ಸುದ್ದಿಗಳ ಆಧಾರದಲ್ಲಿ ಈಗಲೇ ಅಭಿಪ್ರಾಯ ನೀಡಲು ಸಾಧ್ಯವಿಲ್ಲ. ಜುಲೈ 11ರಂದು ಟ್ರಸ್ಟ್ ಸಭೆ ನಡೆಯಲಿದ್ದು, ಅಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ಸಭೆಯಲ್ಲಿ ಭಾಗವಹಿಸಿ ಸಂಪೂರ್ಣ ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ" ಎಂದರು.

ಸಿಂಧಿ ಸಮುದಾಯದವರು 200 ಕೆಜಿ ಬೆಳ್ಳಿ ದೇಣಿಗೆ ನೀಡಿದರೂ ಸೂಕ್ತ ಗೌರವ ದೊರೆಯಲಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, "ದೊಡ್ಡ ಪ್ರಮಾಣದ ದೇಣಿಗೆ ನೀಡಿದವರು ಸ್ಥಳದಲ್ಲೇ ರಶೀದಿ ಪಡೆಯಬೇಕು. ದೇಣಿಗೆ ನೀಡುವವರು ಹಾಗೂ ಸ್ವೀಕರಿಸುವವರು ಇಬ್ಬರಿಗೂ ಜವಾಬ್ದಾರಿ ಇದೆ. ರಶೀದಿ ನೀಡದಿರುವುದು ದೊಡ್ಡ ತಪ್ಪು. ಕೇವಲ ಬಾಯಿಮಾತಿನ ಹೇಳಿಕೆಗಳು ಉಳಿಯಬಾರದು. ಆರೋಪ ಮಾಡಿದ್ದರೆ ವಾಸ್ತವ ಇರಬಹುದು, ಆದರೆ ರಶೀದಿ ನೀಡಿಲ್ಲ ಎನ್ನುವುದನ್ನು ನಂಬಲು ಕಷ್ಟ" ಎಂದು ಹೇಳಿದರು.

ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ ಶ್ರೀಗಳು, "ತಪ್ಪು ನಡೆದಿದ್ದರೆ ಅದರ ವಿಮರ್ಶೆ ಆಗಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ದೇಶ-ವಿದೇಶದ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಈ ಸ್ಥಳದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಸತ್ಯ ಶೀಘ್ರದಲ್ಲಿ ಹೊರಬರಬೇಕು" ಎಂದು ಹೇಳಿದರು.

ತಾವು ಟ್ರಸ್ಟ್ ಸದಸ್ಯರಾಗಿದ್ದ ವೇಳೆ ಹಲವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ಅವರು, "ನಾನು ಹೋದಾಗಲೆಲ್ಲ ಪರಿಶೀಲಿಸಿ ಸಲಹೆ ನೀಡುತ್ತಿದ್ದೆ. ಸಭೆಗಳಲ್ಲಿಯೂ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೆ. ಸಂಬಂಧಪಟ್ಟವರು ವಿಶ್ವಾಸಾರ್ಹರಾಗಿರಬೇಕಿತ್ತು" ಎಂದರು.

ಮಂದಿರದಲ್ಲಿ ಸೇವಾ ಪಟ್ಟಿ ಪ್ರದರ್ಶಿಸದ ಟ್ರಸ್ಟ್‌ನ ನಿಲುವಿನ ಕುರಿತು ಮಾತನಾಡಿದ ಅವರು, "ಇತರ ದೇವಸ್ಥಾನಗಳಲ್ಲಿ ಸೇವಾ ಪಟ್ಟಿ ಇರುತ್ತದೆ. ಆದರೆ ಇಲ್ಲಿ ಅಂತಹ ವ್ಯವಸ್ಥೆ ಇಲ್ಲ. ಮಂದಿರಕ್ಕೆ ಹಣ ನೀಡುವುದಕ್ಕಿಂತ ಬಡವರಿಗೆ ಮನೆ ನಿರ್ಮಿಸಿ ಕೊಡಿ ಎಂದು ನಾನು ಕರೆ ನೀಡಿದ್ದೆ. ದುಃಖಿತರಿಗೆ ನೆರವಾಗುವುದೇ ನಿಜವಾದ ರಾಮಸೇವೆ. ನೂರು ಕೆಜಿ ಬೆಳ್ಳಿ ಕೊಡುವುದಕ್ಕಿಂತ ಸಾವಿರ ಮನೆಗಳನ್ನು ನಿರ್ಮಿಸುವುದು ಶ್ರೇಷ್ಠ" ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ತನಿಖೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಶ್ರೀಗಳು, "ಸರ್ಕಾರ ಸಮರ್ಪಕವಾಗಿ ತನಿಖೆ ನಡೆಸುತ್ತದೆ ಎಂಬ ನಂಬಿಕೆ ಇದೆ" ಎಂದರು.

ಇದೇ ವೇಳೆ, ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಸಂಘಟನೆಯನ್ನು ನೋಂದಣಿ ಮಾಡಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ" ಎಂದು ಹೇಳಿದರು.